ಮಡಿಕೇರಿ, ಮಾ. 16: ಐ.ಸಿ.ಎ.ಆರ್ - ಭಾರತೀಯ ಸಂಬಾರು ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಐ.ಸಿ.ಎ.ಆರ್-ಸಿ.ಟಿ.ಆರ್.ಐ. ಪ್ರಾದೇಶಿಕ ಕೇಂದ್ರ, ಹುಣಸೂರು, ಅಡಿಕೆ ಮತ್ತು ಸಂಬಾರು ಅಭಿವೃದ್ಧಿ ನಿರ್ದೇಶನಾಲಯ, ಕೊಜೀಕೊಡೆ ಇವರ ಸಹಭಾಗಿತ್ವದಲ್ಲಿ ಶುಂಠಿ ಮತ್ತು ಅರಿಶಿಣದ ಉತ್ಪಾದನೆ ಮತ್ತು ಗುಣಮಟ್ಟದಲ್ಲಿ ಸುಧಾರಣೆಗಾಗಿ ವೈಜ್ಞಾನಿಕ ಮತ್ತು ತಾಂತ್ರಿಕತೆಗಳ ಅಳವಡಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಐ.ಸಿ.ಎ.ಆರ್-ಸಿ.ಟಿ.ಆರ್.ಐ. ಪ್ರಾದೇಶಿಕ ಕೇಂದ್ರ, ಹುಣಸೂರಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ವಿಜ್ಞಾನಿ ಡಾ. ವಿ. ಶ್ರೀನಿವಾಸನ್ ನೆರವೇರಿಸಿದರು.

ಡಾ. ಎಸ್. ರಾಮಕೃಷ್ಣನ್, ವೀರಭದ್ರಯ್ಯ, ಉಪಸ್ಥಿತಿಯಲ್ಲಿ ನೆರವೇರಿಸಿದರು. ಡಾ. ಎಸ್. ಜೆ. ಅಂಕೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶುಂಠಿ ಮತ್ತು ಅರಿಶಿಣದ ಬೇಸಾಯ ಕ್ರಮಗಳ ಕುರಿತ ಫೋಲ್ಡರ್‍ನ್ನು ಬಿಡುಗಡೆಗೊಳಿಸಲಾಯಿತು.

ತರಬೇತಿ ಕಾರ್ಯಕ್ರಮದಲ್ಲಿ ತಂಬಾಕು ಬೆಳೆಗೆ ಪರ್ಯಾಯ ಬೆಳೆಗಳಾಗಿ ಶುಂಠಿ ಮತ್ತು ಅರಿಶಿಣದ ಕುರಿತು ಹೆಚ್ಚು ಒತ್ತನ್ನು ನೀಡಲಾಯಿತು. ಶುಂಠಿ ಮತ್ತು ಅರಿಶಿಣದ ಸುಧಾರಿತ ತಳಿಗಳು, ವೈಜ್ಞಾನಿಕ ಬೇಸಾಯ ಕ್ರಮಗಳು, ಕೀಟ ಮತ್ತು ರೋಗದ ನಿರ್ವಹಣೆ ಮತ್ತು ಐ.ಸಿ.ಎ.ಆರ್-ಐ.ಐ.ಎಸ್.ಆರ್‍ನ ಸಂಬಾರು ಸಂಶೋಧನೆ ಕುರಿತು ಐ.ಸಿ.ಎ.ಆರ್-ಐ.ಐ.ಎಸ್.ಆರ್‍ನ ವಿವಿಧ ವಿಜ್ಞಾನಿಗಳು ಉಪನ್ಯಾಸ ನೀಡಿದರು. ರೈತರ ಅನುಕೂಲಕ್ಕಾಗಿ ಪ್ರದರ್ಶನ ಏರ್ಪಡಿಸಲಾಗಿತ್ತು.

80ಕ್ಕೂ ಅಧಿಕ ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂವಾದ ಅಧಿವೇಶನದಲ್ಲಿ ಪ್ರೇಕ್ಷಕರು ಶುಂಠಿ ಮತ್ತು ಅರಿಶಿಣದ ಬೇಸಾಯ ಕ್ರಮಗಳ ಕುರಿತು ಅನುಮಾನಗಳನ್ನು ನಿವಾರಿಸಿಕೊಂಡರು. ಖಾಸಗಿ ಕಂಪನಿಗಳಾದ ಕೊಡಗು ಅಗ್ರಿಟೆಕ್, ಗ್ರೀನ್ ಲೈಫ್ ಸೈನ್ಸ್ ಟೆಕ್ನೋಲಾಜಿ, ಇಂಡೋಫಿಲ್ ಅಂಡ್ ನ್ಯೂಟ್ರಿಫೀಡ್ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.