ಕಣಿವೆ, ಮಾ. 16 : ವಿಶ್ವ ಮಟ್ಟದ ಪ್ರವಾಸಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇದೀಗ ಕೊರೋನಾ ದಿಂದಾಗಿ ಸ್ತಬ್ಧವಾಗಿದೆ. ಸರ್ಕಾರಿ ರಜಾ ದಿನಗಳು ಹಾಗೂ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ಗಿಜಿಗುಡುತ್ತಿದ್ದ ಕೊಡಗಿನ ಪ್ರವಾಸಿ ತಾಣಗಳು ಇದೀಗ ನೀರವ ಮೌನ ತಾಳಿವೆ. ಪ್ರವಾಸೋದ್ಯಮವನ್ನು ಉದ್ಯಮವಾಗಿಸಿ ಕೋಟ್ಯಂತರ ರೂಗಳನ್ನು ಈ ಉದ್ಯಮಕ್ಕೆ ಹಾಕಿಕೊಂಡವರ ಸ್ಥಿತಿಯಂತು ಡೋಲಾಯಮಾನವಾಗಿದೆ. ಬ್ಯಾಂಕುಗಳು, ಸಹಕಾರಿ ಸಂಘಗಳು ಸೇರಿದಂತೆ ವಿವಿಧ ಆಯಾಮಾಗಳಿಂದ ಸಾಲವನ್ನು ತಂದು ಹಾಕಿದ್ದ ಪ್ರವಾಸೋದ್ಯಮಿಗಳ ಪಾಲಿಗೆ ಇದು ತುರ್ತು ಪರಿಸ್ಥಿತಿ ಹೇರಿದಂತಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಏಕೆಂದರೆ ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಒಂದಾದ ಮೇಲೊಂದರಂತೆ ಘಟಿಸುತ್ತಲೇ ಬಂದಂತಹ ಜಲಪ್ರವಾಹ, ಭೂಕುಸಿತ, ಮುಂತಾದ ಅಪಾಯಕಾರಿ ಸನ್ನಿವೇಶಗಳು ಕೊಡಗು ಪ್ರವಾಸೋದ್ಯಮಕ್ಕೆ ಅಪ್ಪಳಿಸಿದ್ದರಿಂದಾಗಿ ಈ ಕ್ಷೇತ್ರ ಅಕ್ಷರಶಃ ಸ್ತಬ್ಧವಾಗಿದೆ. ಕೊಡಗು ಜಿಲ್ಲೆಯಲ್ಲಿ ಹೋಮ್‍ಸ್ಟೇ, ರೆಸಾರ್ಟ್, ಹೋಟೆಲ್ ಮೊದಲಾದವುಗಳಿಂದ ಒಟ್ಟು 30 ಸಾವಿರ ವಸತಿಗೃಹಗಳಿವೆ. ಕೊಡಗು ಪ್ರವಾಸೋದ್ಯಮವನ್ನು ಆಶ್ರಯಿಸಿ ಕೊಡಗಿನಲ್ಲಿ ಬರೋಬ್ಬರಿ ಒಂದು ಲಕ್ಷ ಮಂದಿ ಇದ್ದು ಇದೀಗ ಈ ಮಂದಿಯ ಭವಿಷ್ಯದ ಮೇಲೂ ಕೊರೊನಾ ಪರೋಕ್ಷವಾಗಿ ಅಟ್ಟಹಾಸ ತೋರಿದೆ. ಬಹಳಷ್ಟು ಕಡೆ ಪ್ರವಾಸಿಗರು ಬಾರದೇ ಖಾಲಿ ಹೊಡೆಯುತ್ತಿರುವ ಹೋಟೆಲ್ ಹಾಗೂ ವಸತಿ ಗೃಹಗಳಿಂದಾಗಿ ಹೊಟೇಲ್, ರೆಸಾರ್ಟ್‍ಗಳನ್ನು ಮುಂದಿನ ಕೆಲ ದಿನಗಳ ಕಾಲ ಮುಚ್ಚುವ ತೀರ್ಮಾನಕ್ಕೂ ಕೆಲವರು ಬಂದಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ಮೊದಲೇ ಒಂದಾದ ಮೇಲೊಂದರಂತೆ ಬಿಡದೇ ಕಾಡಿದ ವಿಪತ್ತುಗಳಿಂದ ಸಾಕಷ್ಟು ನೊಂದು ಬೆಂದು ನಷ್ಟ ಅನುಭವಿಸಿರುವ ಮಾಲೀಕರು ಸಿಬ್ಬಂದಿಗಳಿಗೆ ರಜೆ ನೀಡಿ ಹೊಟೇಲ್ ರೆಸಾರ್ಟ್ ಮುಚ್ಚಿದರೆ ಅಷ್ಟು ದಿನಗಳ ನಷ್ಟವನ್ನಾದರೂ ತಡೆಯಬಹುದಲ್ಲಾ ಎಂಬ ಚಿಂತನೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಕೊಡಗು ಪ್ರವಾಸೋದ್ಯಮದ ಇತಿಹಾಸದಲ್ಲಿಯೇ ಇಂತಹ ಕರಾಳ ದಿನಗಳನ್ನು ಕಂಡಿರಲಿಲ್ಲ ಎಂದು “ಶಕ್ತಿ’’ ಯೊಂದಿಗೆ ಅಭಿಪ್ರಾಯಿಸಿದ ಕೊಡಗು ಜಿಲ್ಲಾ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್, ಕೊಡಗಿನ ಪ್ರವಾಸೋದ್ಯಮಿಗಳು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ. ನಮ್ಮ ಪ್ರವಾಸಿ ಚಟುವಟಿಕೆಗಳು ನೆಲಕಚ್ಚಿವೆ. ಇದರಿಂದಾಗಿ ನಾವು ಹೇಗೆ ಚೇತರಿಸಿಕೊಳ್ಳಬೇಕು ಎಂಬ ಚಿಂತೆ ಎಲ್ಲರನ್ನು ಕಾಡುತ್ತಿದೆ. ಈ ಹಿಂದೆ ಕೊಡಗಿನಲ್ಲಿ ಜಲಪ್ರಳಯ ಆದಾಗ ಕೊಡಗೇ ಕೊಚ್ವಿ ಹೋಯ್ತು ಎಂದು ವಿಶ್ವಕ್ಕೆ ಸಾರಿದ ದೃಶ್ಯ ಮಾಧ್ಯಮಗಳಿಂದಾಗಿ ಕೊಡಗಿಗೆ ಪ್ರವಾಸಿಗರು ಬಾರದಿದ್ದರಿಂದ ನಮಗೆ ದಿಕ್ಕೇ ತೋಚದ ಸ್ಥಿತಿ ಬಂದೊದಗಿತ್ತು. ಕೊನೆಗೆ ಪ್ರವಾಸೋದ್ಯಮಿಗಳೆಲ್ಲಾ ಸಭೆ ಸೇರಿ ಚರ್ಚಿಸಿ ಜಿಲ್ಲಾಡಳಿತದ ಸಹಕಾರದಿಂದ ಪ್ರವಾಸೀ ಉತ್ಸವ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಿ ಪ್ರವಾಸಿಗರನ್ನು ಸೆಳೆಯುವ ಒಂದಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಇದೀಗ ಕಾಡುತ್ತಿರುವ ಕೊರೊನಾ ಪ್ರವಾಸೋದ್ಯಮವನ್ನು ಎಲ್ಲಿಗೆ ಒಯ್ಯಲಿದೆಯೋ ಗೊತ್ತಿಲ್ಲ ಎನ್ನುತ್ತಾರೆ ನಾಗೇಂದ್ರಪ್ರಸಾದ್. ಕೊರೊನಾ ಭೀತಿಯಿಂದ ದೂರದ ಪ್ರವಾಸಿಗರಲ್ಲಿ ಮೊದಲೇ ಆತಂಕವಿತ್ತು. ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ವಾರಗಳ ಕಾಲ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಸಾರ್ವಜನಿಕರು ಆರೋಗ್ಯದ ಹಿತದೃಷ್ಟಿಯಿಂದ ಎಲ್ಲೂ ತೆರಳಬಾರದು ಎಂದು ಹೇಳಿ, ಪ್ರಮುಖ ಪ್ರವಾಸಿ ಸ್ಥಳಗಳ ಪ್ರವೇಶವನ್ನು ಬಂದ್ ಮಾಡಿದ ಮೇಲೆ ಪ್ರವಾಸಿಗರು ಬಾರದ ಕಾರಣ ಕೊಡಗು ಪ್ರವಾಸೋದ್ಯಮ ನೆಲಕಚ್ಚಿದೆ. ನಿತ್ಯವೂ ದೇಶ ವಿದೇಶಗಳ ಪ್ರವಾಸಿಗರಿಂದ ಕೂಡಿರುತ್ತಿದ್ದ ದುಬಾರೆಯಲ್ಲಿ ಇತಿಹಾಸದಲ್ಲೇ ಮೊದಲು ಎಂಬಂತೆ ಪ್ರವಾಸಿಗರ ಆಗಮನಕ್ಕೆ ಅನುಮತಿಯಿಲ್ಲ ಹಾಗೂ ಪ್ರವೇಶವಿಲ್ಲ ಎಂಬ ನಾಮಫಲಕವನ್ನು ಸ್ಥಳೀಯ ನಂಜರಾಯಪಟ್ಡಣ ಪಂಚಾಯತಿ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಅಳವಡಿಸಿದ್ದು, ಮುಖ್ಯ ರಸ್ತೆಯ ಪ್ರವೇಶ ದ್ವಾರವನ್ನೇ ಬಂದ್ ಮಾಡಿದೆ. ಪ್ರವಾಸಿಗರು ಬಾರದ ಸ್ಥಿತಿ ಉದ್ಭವಿಸಿದರೆ ಕೋಟ್ಯಾಂತರ ರೂಗಳನ್ನು ಸುರಿದು ಹೊಟೇಲ್ ಹಾಗೂ ವಸತಿಗೃಹಗಳನ್ನು ತೆರದುಕೊಂಡಿರುವ ನಮ್ಮ ಕಥೆ ಮುಂದೆ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ದುಬಾರೆಯ ಹೋಟೆಲ್ ಉದ್ಯಮಿ ಕೆ.ಎಸ್. ರತೀಶ್. - ಕೆ. ಎಸ್. ಮೂರ್ತಿ