ಕುಶಾಲನಗರ, ಮಾ 16: ಬಿರು ಬೇಸಿಗೆಯ ನಡುವೆ ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ನದಿ ತಟದ ನಾಗರಿಕರು ಕುಡಿಯುವ ನೀರಿಗಾಗಿ ಬವಣೆಪಡಬೇಕಾದ ಪರಿಸ್ಥಿತಿ ಗೋಚರಿಸಿದೆ. ಕಳೆದ ಮಳೆಗಾಲದಲ್ಲಿ ಕಾವೇರಿ ತುಂಬಿ ಹರಿದು ಪ್ರವಾಹದಿಂದ ನದಿ ತಟಗಳು ಜಲಾವೃತಗೊಂಡಿದ್ದರೂ ಮಾಮೂಲಿಯಂತೆ ಪ್ರಸಕ್ತ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇನ್ನೊಂದೆಡೆ ಗ್ರಾಮ ಮತ್ತು ಪಟ್ಟಣಗಳ ಕಲುಷಿತ ನೀರು ನೇರವಾಗಿ ನದಿಗೆ ಹರಿಯುತ್ತಿರುವ ಕಾರಣ ನದಿ ನೀರು ಕೂಡ ನೇರ ಬಳಕೆಗೆ ಯೋಗ್ಯವಲ್ಲದೆ ನದಿಯಲ್ಲಿ ಹರಿಯುವ ನೀರಿನ ಪ್ರಮಾಣಕ್ಕಿಂತ ಅಧಿಕ ಪ್ರಮಾಣದ ಕಲುಷಿತ ನೀರು ಪಟ್ಟಣ ಮತ್ತು ಗ್ರಾಮಗಳಿಂದ ಹರಿಯುತ್ತಿರುವುದು ಈ ಆತಂಕಕ್ಕೆ ಎಡೆ ಮಾಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆಗಳು ಇರುವುದಾಗಿ ನಾಗರಿಕರು ನದಿ ನೀರನ್ನು ಬಳಸಲು ಹಿಂದೇಟು ಹಾಕುತ್ತಿರುವ ಪ್ರಕರಣಗಳು ಗೋಚರಿಸಿವೆ. ಕಳೆದ ಕೆಲವು ತಿಂಗಳ ಹಿಂದೆ ಅತಿವೃಷ್ಠಿಯಾಗಿ ಕಾವೇರಿ ತುಂಬಿ ಹರಿದಿದ್ದರೂ ಪ್ರಸಕ್ತ ನದಿಯಲ್ಲಿ ನೀರಿನ ಕೊರತೆ ಕಂಡುಬಂದಿದ್ದು ಜನರು ಅಚ್ಚರಿಪಡುತ್ತಿರುವ ದೃಶ್ಯ ಗೋಚರಿಸಿದೆ.

ಕಳೆದ ಬಾರಿ ಮಾರ್ಚ್ ತಿಂಗಳಲ್ಲಿ ನದಿಯಲ್ಲಿ ನೀರು ಬತ್ತಿ ಹೋಗಿದ್ದು ಕುಡಿವ ನೀರಿಗಾಗಿ ಮೂರು ವಾರಗಳ ಕಾಲ ಪಟ್ಟಣದ ಜನತೆ ಸಂಕಷ್ಟ ಎದುರಿಸುವ ಸ್ಥಿತಿ ಉಂಟಾಗಿತ್ತು. ಈ ಬಾರಿ ಅಂತಹ ಸ್ಥಿತಿ ಉಂಟಾಗಿಲ್ಲ ಎನ್ನುತ್ತಾರೆ. ಜಲಮಂಡಳಿಯ ಅಧಿಕಾರಿ ಆನಂದ್. ಪ್ರತಿ ಎರಡು ದಿನಕ್ಕೊಮ್ಮೆ ಕುಡಿವ ನೀರು ಒದಗಿಸಲಾಗುತ್ತಿದೆ. 25 ಲಕ್ಷ ಲೀಟರ್ ಪ್ರಮಾಣದ ನೀರು ಅವಶ್ಯಕತೆಯಿದ್ದು ಇದರ ನಿರ್ವಹಣೆ ನಡೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೆ ಸರಾಸರಿ 135 ಲೀ ನೀರಿನ ಅವಶ್ಯಕತೆಯಿದ್ದು ಸುಮಾರು 90 ಲೀ ಪ್ರಮಾಣದ ನೀರನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಬೈಚನಹಳ್ಳಿಯ ಬಳಿ ನೀರೆತ್ತಲು ಅಳವಡಿಸಿರುವ ಪಂಪ್‍ಹೌಸ್ ಬಳಿ ಶಾಶ್ವತವಾಗಿ ಬ್ಯಾರೆಜ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.