ಮಡಿಕೇರಿ, ಮಾ. 16: ಇದೇ ತಾ. 17 ರಿಂದ 19 ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ವೀರಾಜಪೇಟೆ ಮೀನುಪೇಟೆಯ ಚೈತನ್ಯ ಮಠಪುರ ಶ್ರೀಮುತ್ತಪ್ಪ ದೇವಾಲಯದ 76ನೇ ವರ್ಷದ ತೆರೆ ಮಹೋತ್ಸವವನ್ನು ಮುಂದೂಡಲಾಗಿದೆ ಎಂದು ದೇವಾಲಯದ ಅಧ್ಯಕ್ಷ ಈ.ಸಿ. ಜೀವನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಒಂದು ವಾರ ಕಾಲ ಅನೇಕ ಆಚರಣೆ, ಜಾತ್ರೆಗಳಿಗೆ ನಿರ್ಬಂಧ ಹೇರಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವವನ್ನು ಮುಂದೂಡಲಾಗಿದ್ದು, ತಂತ್ರಿಗಳು ಹಾಗೂ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ದೇವಾಲಯದ ಕೆ.ಬಿ. ಹರ್ಷವರ್ಧನ್, ಪಿ.ವಿ. ಸುಶಾಂತ್, ಕಾರ್ಯದರ್ಶಿ ಟಿ.ಕೆ. ರಾಜನ್ ಹಾಗೂ ಸಹ ಕಾರ್ಯದರ್ಶಿ ಸಿ.ಆರ್. ಸಜೀವ್ ಉಪಸ್ಥಿತರಿದ್ದರು.