ಗೋಣಿಕೊಪ್ಪಲು, ಮಾ.16: ದ.ಕೊಡಗಿನ ಬಾಳೆಲೆ, ಶ್ರೀಮಂಗಲ ಹಾಗೂ ಹುದಿಕೇರಿ ಹೋಬಳಿಯಲ್ಲಿ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ವಿದ್ಯುತ್ ಸಮಸ್ಯೆಯ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ರೈತ ಸಂಘದ ಗೋಣಿಕೊಪ್ಪ ಕೇಂದ್ರ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ರೈತ ಪದಾಧಿಕಾರಿಗಳ ಮಾಸಿಕ ಸಭೆಯಲ್ಲಿ ರೈತರಿಗೆ ಲಭ್ಯವಾಗುತ್ತಿರುವ ವಿದ್ಯುತ್ ಸೇರಿದಂತೆ ಇನ್ನಿತರ ಚರ್ಚೆಗಳು ನಡೆದವು.
ರೈತ ಸಂಘದ ಕಚೇರಿಗೆ ಅಧಿಕಾರಿ ಅಂಕಯ್ಯ ಅವರನ್ನು ಬರಮಾಡಿಕೊಂಡ ರೈತ ಸಂಘದ ಪದಾಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಸಮರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿರುವ ಬಗ್ಗೆ ಅಧಿಕಾರಿ ಮಾಹಿತಿ ಒದಗಿಸಿದರು. ಹಲವು ವರ್ಷಗಳ ಕಾಲ ನೆನೆಗುದಿಯಲ್ಲಿ ಬಿದ್ದಿದ್ದ ಗೋಣಿಕೊಪ್ಪ ತಿತಿಮತಿ ಎಕ್ಸ್ಪ್ರೆಸ್ ವಿದ್ಯುತ್ ಲೈನ್ ಕಾರ್ಯಾರಂಭ ಮಾಡಲಾಗಿದ್ದು ಕಿರಿಯ ಮಟ್ಟದ ಅಧಿಕಾರಿಗಳು ವಿದ್ಯುತ್ ಸಂಪರ್ಕದ ಬಗ್ಗೆ ಎಚ್ಚರಿಕೆ ವಹಿಸುತ್ತಿರುವ ಬಗ್ಗೆ ಗೋಣಿಕೊಪ್ಪ ಚೆಸ್ಕಾಂನ ಎಇಇ ಅಂಕಯ್ಯ ಸಭೆಗೆ ಮಾಹಿತಿ ನೀಡಿದರು.
ಪೊನ್ನಂಪೇಟೆಯ ವಿದ್ಯುತ್ ಸ್ಥಾವರದಿಂದ ಬಾಳೆಲೆ ಹೋಬಳಿಗೆ ಸರಬರಾಜಾಗುತ್ತಿರುವ ಎಕ್ಸ್ಪ್ರೆಸ್ ವಿದ್ಯುತ್ ಲೈನ್ನಲ್ಲಿ ಆಗಿಂದಾಗ್ಗೆ ಸಮಸ್ಯೆಗಳು ಎದುರಾಗುತ್ತಿರುವುದು ಮನಗಂಡು ಕೇಬಲ್ ಕೆಲಸ ನಿರ್ವಹಿಸಿದ ಏಜೆನ್ಸಿಯನ್ನು ಕರೆಸಿ ವಿದ್ಯುತ್ ಲೈನ್ನ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ನಲ್ಲೂರಿನ ಎಫ್1 ಲೈನ್ ಪ್ರಗತಿಯಲ್ಲಿದ್ದು ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹುದಿಕೇರಿ ಹಾಗೂ ಶ್ರೀಮಂಗಲ ಹೋಬಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಸ್ಕಾಂನ ಕಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದು ವಿದ್ಯುತ್ ಸರಬರಾಜಿನ ಬಗ್ಗೆ ನಿಗಾವಹಿಸಬೇಕೆಂದು ಎಚ್ಚರಿಕೆಯ ನೋಟಿಸು ನೀಡಲಾಗಿದೆ ಎಂದು ಅಂಕಯ್ಯ ಮಾಹಿತಿ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಇಟ್ಟಿರ ಸಬಿತ ಭೀಮಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್ ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ ಮಾಚಯ್ಯ, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ರೈತ ಮುಖಂಡರಾದ ಕಿರುಗೂರಿನ ಕಾವಡಿಚಂಡ ಕಮಲ, ಶ್ರೀಮಂಗಲದ ಕುಪ್ಪಂಡ ಸಂಜು, ಚೌರಿರ ಉತ್ತಪ್ಪ, ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು. ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಸ್ವಾಗತಿಸಿ ವಂದಿಸಿದರು.