ಮಡಿಕೇರಿ, ಮಾ. 16: ಮಡಿಕೇರಿಯ ನಾಡದೇವಿ ಎಂಬ ಹೆಗ್ಗಳಿಕೆಯ ಶ್ರೀ ಕರವಾಲೆ ಭಗವತಿ ಮಹಿಷಾಮರ್ಧಿನಿ ಸನ್ನಿಧಿಯಲ್ಲಿ ಇಂದು ವಾರ್ಷಿಕ ಉತ್ಸವದೊಂದಿಗೆ, ಭಯಾನಕ ಕೊರೊನಾ ಭೀತಿ ಮರೆತು ಸದ್ಭಕ್ತರು ಪಾಲ್ಗೊಂಡು ಹರಕೆ, ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.
ದೇವಾಲಯದಲ್ಲಿ ತಾ. 13ರಂದು ಚಂಡಿಕಾ ಹವನದೊಂದಿಗೆ ಮೊನ್ನೆ ಹಾಗೂ ನಿನ್ನೆ ವಿವಿಧ ದೈವಿಕ ಕೈಂಕರ್ಯಗಳು, ವಾರ್ಷಿಕೋತ್ಸವ ಸಲುವಾಗಿ ನೆರವೇರಿತು.
ಇಂದು ವಾರ್ಷಿಕ ದೊಡ್ಡಹಬ್ಬದ ಸಲುವಾಗಿ ಬೆಳಿಗ್ಗೆಯಿಂದಲೇ ತಳಿರು - ತೋರಣಗಳಿಂದ ಸಿಂಗಾರಗೊಂಡಿದ್ದ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ ಮಹಾಪೂಜೆ ಬಳಿಕ 2 ಗಂಟೆಗೆ ಗ್ರಾಮಸ್ಥರು ಸಂಪ್ರದಾಯದಂತೆ ದುಡಿ ಹಾಡು, ಎತ್ತು ಪೋರಾಟ ಸಹಿತ ದೇವಾಲಯಕ್ಕೆ ಆಗಮಿಸಿ ಭಕ್ತಿಯಿಂದ ದೇವಿಯ ದರ್ಶನ ಪಡೆದರು. ವಿಶೇಷವಾಗಿ ದೇವಿ ಸನ್ನಿಧಿಯಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೆಣ್ಣು - ಗಂಡಿನ ಉಡುಗೆ, ಗಂಡು - ಹೆಣ್ಣಿನ ಉಡುಗೆ ಧರಿಸಿ ಹರಕೆ ಕಾಣಿಕೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಅನಂತರದಲ್ಲಿ ದೇವರ ನೃತ್ಯಬಲಿ ಸೇವೆ, ಬೊಳಕಾಟ್, ಮುಂತಾದ ಸೇವೆಗಳ ಬಳಿಕ, ತೆಂಗಿನ ಕಾಯಿಗೆ ಗುಂಡುಹೊಡೆಯುವ ಮೂಲಕ, ಸಾಂಪ್ರದಾಯಿಕ ಹಬ್ಬದ ಕಟ್ಟುಪಾಡುಗಳನ್ನು ಸಡಿಲಿಸುವ ಕ್ರಮ ನೆರವೇರಿತು. ಇದರೊಂದಿಗೆ ವಿಷ್ಣುಮೂರ್ತಿ ತೆರೆ ಹಾಗೂ ಇತರ ಸಂಪ್ರದಾಯಗಳು ಮುಂದುವರೆಯಿತು.
ಕೊರೊನಾ ಭಯ ನಿವಾರಣೆ : ಭಾರತೀಯ ಪರಂಪರೆಯ ನಂಬಿಕೆಯಲ್ಲಿ ‘‘ಎಲ್ಲಿ ಗೋ ಸಂಪತ್ತು ಮನುಕುಲದ ಸಂಗಾತಿಯಾಗಿ ಇರಲಿದೆಯೋ ಅಲ್ಲಿ ರೋಗಭಯ ಇರುವುದಿಲ್ಲ’’ ಎಂಬಂತೆ ಇಂದು ಅಲಂಕಾರಗೊಳಿಸಿದ ಎತ್ತುಗಳ ಬೆನ್ನಲ್ಲಿ ಅಕ್ಕಿ ಇತ್ಯಾದಿ ಹೊರೆಕಾಣಿಕೆ ತಂದು ದೇವಿಗೆ ಸಮರ್ಪಿಸುವದರೊಂದಿಗೆ, ಕೊರೊನಾ ಭಯ ಮರೆತು ಭಕ್ತಾದಿಗಳು ಪಾಲ್ಗೊಂಡು ಎಲ್ಲರ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದು ವಿಶೇಷವೆನಿಸಿತು. ಕೊಡಗಿನ ಸಾಂಪ್ರದಾಯಿಕ ವಾಲಗ ಸಹಿತ ಬೊಳಕಾಟ್, ದುಡಿಪಾಟ್ ಗಮನ ಸೆಳೆಯಿತು.
-ಚಿತ್ರ, ವರದಿ : ಟಿ.ಜಿ. ಸತೀಶ್.