ವೀರಾಜಪೇಟೆ, ಮಾ. 16: ಕಳೆದ ಎಂಟು ವರ್ಷಗಳ ಹಿಂದೆ ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿ ಪ್ರಿಯತಮನಿಗೆ ಸುಪಾರಿ ನೀಡಿ ಗಂಡನನ್ನು ಬರ್ಬರವಾಗಿ ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಮೊದಲ ಆರೋಪಿ ಕೆ.ಸಿ.ಗೋಪಾಲಕೃಷ್ಣ ಅಲಿಯಾಸ್ ಗಿರೀಶ್ ಎರಡನೇ ಆರೋಪಿ ಮಧುಸೂದನ್ ಹಾಗೂ ಮೂರನೇ ಆರೋಪಿ ಶಶಿಕಲಾ ಎಂಬ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ 50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ವೀರಾಜಪೇಟೆ ಬಳಿಯ ಮಗ್ಗುಲದ ವಿನಾಯಕ ನಗರದ ನಿವಾಸಿ ರಂಗಸ್ವಾಮಿ ಅಲಿಯಾಸ್ ಯೋಗಾನಂದ ಎಂಬಾತನನ್ನು ತಾ.4-11-12 ರಂದು ಬೆಳಿಗ್ಗೆ ಈ ಮೂರು ಮಂದಿ ಸೇರಿ ಮದ್ಯಪಾನ ಮಾಡಿಸಿ (ಕೆ.ಎ.5 ಎಂಇ 9779)ರ ಟಾಟಾ ಇಂಡಿಕಾ ಕಾರಿನಲ್ಲಿ ಕೂರಿಸಿ ಚೆಂಬೆಬೆಳ್ಳೂರು ಗ್ರಾಮದ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ; ರಂಗಸ್ವಾಮಿ ಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದ ಮೇರೆ ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಪಿ.ಪಿ.ಸಂತೋಷ್ ರಂಗಸ್ವಾಮಿಯ ಪತ್ನಿ ಶಶಿಕಲಾ ಸೇರಿದಂತೆ ಮೂವರನ್ನು ಬಂಧಿಸಿ ನ್ಯಾಯಾಲ ಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೊಲೆ ಆರೋಪ ಸಾಬೀತಾಗಿರುವುದರಿಂದ ಐ.ಪಿ.ಸಿ 302 ಜೊತೆಗೆ 120(ಬಿ) ಭಾ.ದಂ.ಸಂ ಅಡಿಯಲ್ಲಿ ಜೀವಾವಧಿ ಶಿಕ್ಷೆ, ತಲಾ ರೂ 50,000 ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಎರಡು ವರ್ಷಗಳ ಸಾದಾ ಸಜೆ ಭಾ.ದಂ.ಸಂ ಕಲಂ 201ರ ಅಡಿಯಲ್ಲಿ ಮೂರು ಆರೋಪಿಗಳು ಮೂರು ವರ್ಷ ಸಜೆ ಹಾಗೂ ರೂ 5000 ದಂಡ ಪಾವತಿಸಬೇಕು. ದಂಡ ಪಾವತಿಸದಿದ್ದರೆ ಮತ್ತೆ 6ತಿಂಗಳ ಸಜೆ ಅನುಭವಿಸಬೇಕು. ಈ ದಂಡದ ಹಣದಲ್ಲಿ ಮೃತ ರಂಗಸ್ವಾಮಿಯ ಇಬ್ಬರು ಮಕ್ಕಳಿಗೆ ತಲಾ ರೂ 75000 ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಆರೋಪಿ ಕೆ.ಸಿ.ಗೋಪಾಲಕೃಷ್ಣ ಮಾಜಿ ಸೈನಿಕನಾಗಿ ಆಟೋ ರಿಕ್ಷಾ ಚಾಲಕನಾಗಿ ಇಲ್ಲಿನ ಬೋಯಿಕೇರಿ ಗ್ರಾಮದ ನಿವಾಸಿಯಾಗಿದ್ದನು. ಮೃತ ರಂಗಸ್ವಾಮಿಯ ಪತ್ನಿ ಮೂಲತಃ ಮೈಸೂರು ಬಳಿಯ ಇಲವಾಲ ಗ್ರಾಮದ ನಿವಾಸಿಯಾಗಿದ್ದು ಸುಮಾರು 12ವರ್ಷಗಳ ಹಿಂದೆ ಮಗ್ಗುಲದ ವಿನಾಯಕ ನಗರದ ರಂಗಸ್ವಾಮಿಯನ್ನು ಮದುವೆಯಾಗಿ ದ್ದಳು. ಈ ಕೊಲೆ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಡಿ.ನಾರಾಯಣ ವಾದಿಸಿದರು.