ಗೋಣಿಕೊಪ್ಪಲು, ಮಾ.15: ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾ.4 ರಂದು ದುಬಾರೆಗೆ ಪ್ರವಾಸ ತೆರಳಿದ್ದ ಸಂದರ್ಭ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ್ದು, ಇದೀಗ ಮಕ್ಕಳ ಜೀವದ ಬಗ್ಗೆ ಎಚ್ಚರಿಕೆ ವಹಿಸಲಿಲ್ಲ ಎಂಬ ಕಾರಣಕ್ಕಾಗಿ ಲಯನ್ಸ್ ಶಾಲಾ ಆಡಳಿತ ಮಂಡಳಿ ‘ಸ್ಕೌಟ್ಸ್ ಅಂಡ್ ಗೈಡ್ಸ್’ ನ ಇಬ್ಬರು ಮುಖ್ಯಸ್ಥರಾದ ನಾಗೇಶ್ ಹಾಗೂ ಅನಿತಾ ಉಪ್ಪಿ ಅವರುಗಳನ್ನು ಅಮಾನತು ಮಾಡಿರುವದಾಗಿ ಲಯನ್ಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಅಕ್ಕಮ್ಮ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದ ನಂತರ ಲಯನ್ಸ್ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ಮಾರ್ಚ್ ತಿಂಗಳಿನ ಪರೀಕ್ಷಾ ಸಮಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವಿದ್ಯಾರ್ಥಿಗಳ ಪೆÇೀಷಕರಿಗೆ ಖಚಿತ ಮಾಹಿತಿ ನೀಡದೆ ಹಾರಂಗಿ ಹಾಗೂ ದುಬಾರೆಗೆ ಅನಿರೀಕ್ಷಿತ ಪ್ರವಾಸ ಕೈಗೊಂಡಿರುವದರ ಕುರಿತು ಪೆÇೀಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ರವಾಸದ ವೇಳೆ ಕಾನೂರಿನ 9ನೇ ತರಗತಿ ವಿದ್ಯಾರ್ಥಿ ಕೋದೇಂಗಡ ಎಂ.ಶ್ರೇಯಸ್ (16), 10ನೇ ತರಗತಿಯ ಲೆನಿನ್ ಬೋಪಣ್ಣ (16) ದುರಂತ ಸಾವಿಗೀಡಾಗಿದ್ದರು.

ಪಿ.ಜಿ.ಆರ್.ಸಿಂಧ್ಯ ಎರಡು ಬಾರಿ ಭೇಟಿ

ಕರ್ನಾಟಕ ರಾಜ್ಯ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಮುಖ್ಯ ಆಯುಕ್ತರಾದ ಮಾಜಿ ಗೃಹಮಂತ್ರಿ, ಹಣಕಾಸು, ಆರೋಗ್ಯ ಸಚಿವ, ಕೈಗಾರಿಕೆ ಮತ್ತು ಸಾರಿಗೆ ಮಂತ್ರಿಯಾಗಿದ್ದ ಪಿಜಿಆರ್ ಸಿಂಧ್ಯ ಅವರು ತಾ.5 ರಂದು ಶ್ರೇಯಸ್ ಹಾಗೂ ಲೆನಿನ್ ಬೋಪಣ್ಣ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರಲ್ಲದೆ, ಮಾರ್ಚ್ ತಿಂಗಳಿನಲ್ಲಿ ಪರೀಕ್ಷಾ ಸಮಯದಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೆÇಲೀಸ್ ಅಧೀಕ್ಷಕರನ್ನು ಕೋರಿದ್ದರು.

ರೂ.3 ಲಕ್ಷ ಪರಿಹಾರ

ರಾಜ್ಯ ಸ್ಕೌಟ್ಸ್ ಅಂಡ್ ಗೈಡ್ಸ್ ಇಲಾಖೆ ಮೂಲಕ ಇಬ್ಬರು ವಿದ್ಯಾರ್ಥಿಗಳ ಪೆÇೀಷಕರಿಗೆ ತಲಾ ರೂ.3 ಲಕ್ಷ ಪರಿಹಾರ ನೀಡುವದಾಗಿ ಪಿಜಿಆರ್ ಸಿಂಧ್ಯ ಮಾಹಿತಿ ನೀಡಿದ್ದಾರೆ. ತಾ.14 ರಂದು ಮತ್ತೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಿಂಧ್ಯ ಅವರು ದುಬಾರೆ ಘಟನಾ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳು ಸಾವನ್ನಪ್ಪಿದರೆನ್ನಲಾದ ಆಳವಾದ ಗುಂಡಿ ಇರುವ ಪ್ರದೇಶವನ್ನು ವೀಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವದರಿಂದ ಸ್ಮರಣಾರ್ಥವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು. ದುಬಾರೆಯಲ್ಲಿ ಕಾವೇರಿ ನದಿಯನ್ನು ದಾಟಿ ಆನೆ ಕ್ಯಾಂಪ್ ವೀಕ್ಷಣೆಗೆ ಸೇತುವೆ ಅಥವಾ ತೂಗು ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವದು ಎಂದು ತಿಳಿಸಿದ್ದಾರೆ. ಇದೇ ಸಂದರ್ಭ ವಿದ್ಯಾರ್ಥಿಗಳು ಸಾವನ್ನಪ್ಪಿದ ಬಗ್ಗೆ ಅಲ್ಲಿನ ರೆಸ್ಟೋರೆಂಟ್‍ನ ರಿತೀಶ್ ಎಂಬವರು ತನಗೆ ಮಾಹಿತಿ ನೀಡಿದುದಾಗಿಯೂ ತಿಳಿಸಿದ್ದಾರೆ.

ಉಪ ವಿಭಾಗಾಧಿಕಾರಿ ಸಭೆ

ಮಂಗಳವಾರ ತಾ.17 ರಂದು ಶಿಕ್ಷಣ ಇಲಾಖೆ,ಪೆÇಲೀಸ್ ಇಲಾಖೆ ಮತ್ತು ಸಂಬಂದಿಸಿದ ಇಲಾಖಾಧಿಕಾರಿಗಳು ಸಭೆಯನ್ನು ಮಡಿಕೇರಿಯಲ್ಲಿ ಉಪ ವಿಭಾಗಾಧಿಕಾರಿಗಳು ಕರೆದಿದ್ದು, ತಮ್ಮ ಆಯುಕ್ತರ ಕಚೇರಿಯ ಅಧಿಕಾರಿಗಳೂ ಭಾಗವಹಿಸಲಿದ್ದಾರೆ. ಅಂದಿನ ಸಭೆಯ ಮಾಹಿತಿ ಹೊಂದಿಕೊಂಡು ಮುಂದೆ ಮತ್ತೆ ಕೊಡಗಿಗೆ ಭೇಟಿ ನೀಡುವದಾಗಿ ತಿಳಿಸಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಗಳು ವಿದ್ಯಾರ್ಥಿ ಕಲ್ಯಾಣ ನಿಧಿಯಿಂದ ವಿದ್ಯಾರ್ಥಿ ಕುಟುಂಬ ವರ್ಗಕ್ಕೆ ತಲಾ ರೂ.1 ಲಕ್ಷ ಪರಿಹಾರ ಒದಗಿಸ ಲಾಗುವದು ಎಂದು ತಿಳಿಸಿದ್ದಾರೆ. ಇಂದು ಮಾಧ್ಯಮದೊಂದಿಗೆ ಮಾತನಾಡಿದ ಲಯನ್ಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಅಕ್ಕಮ್ಮ ಅವರು ಗುಂಪು ವಿಮಾ ಯೋಜನೆಯನ್ನು ಎಲ್ಲ ಮಕ್ಕಳಿಗೆ ಅಳವಡಿಸಲಾಗಿದ್ದು, ಮರಣ ದೃಢೀಕರಣ ಪತ್ರ ದೊರಕಿದ ನಂತರ ವಿಮಾ ಮೊತ್ತವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗುವದು ಎಂದು ತಿಳಿಸಿದ್ದಾರೆ.

ಮರಣೋತ್ತರ ಶೌರ್ಯ ಪ್ರಶಸ್ತಿ

ಈಜು ಬಾರದೆ ಇದ್ದರೂ,ಓರ್ವ ಸಹಪಾಠಿಯನ್ನು ರಕ್ಷಿಸಿ ಮತ್ತೋರ್ವ ಸಹಪಾಠಿಯ ರಕ್ಷಣೆಯ ಸಂದರ್ಭ ತಾನೂ ಮುಳುಗಿ ಸಾವನ್ನಪ್ಪಿದ ಲೆನಿನ್ ಬೋಪಣ್ಣಗೆ ಮರಣೋತ್ತರ ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುವದು ಎಂದು ಸ್ಕೌಟ್ ಅಂಡ್ ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯ ತಿಳಿಸಿದ್ದು, ಶಾಲಾ ಮುಖ್ಯೋಪಾಧ್ಯಾಯಿನಿ ಅಕ್ಕಮ್ಮ ಅವರೂ ಶಾಲೆ ಮೂಲಕ ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಪತ್ರ ಬರೆಯಲಾಗುವದು ಎಂದು ತಿಳಿಸಿದ್ದಾರೆ.

ದುಬಾರೆಯಲ್ಲಿ ಮತ್ತೆ 6 ಎಚ್ಚರಿಕೆ ಫಲಕ

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಈ ಹಿಂದೆ ನಾಮಫಲಕ ಅಳಡಿಸಿದ್ದರೂ ಪ್ರವಾಹ ಸಂದರ್ಭ ಎಚ್ಚರಿಕೆ ಫಲಕಗಳು ನೀರಿನಲ್ಲಿ ಕೊಚ್ಚಿಹೋಗುವ ಹಿನ್ನೆಲೆ ಇದೀಗ ಅಪಾಯದ ಸ್ಥಳದಲ್ಲಿ ಮತ್ತೆ 6 ಫಲಕ ಅಳವಡಿಸಲಾಗಿದೆ. ಈಗಿದ್ದೂ ವಿದ್ಯಾರ್ಥಿಗಳು, ಶಿಕ್ಷಕರು ಅಲ್ಲಿನ ಸ್ಥಳೀಯರ ಮಾತನ್ನೂ ಕೇಳದೆ ಸುಳಿ ಇರುವ ಅಪಾಯದ ಜಾಗಕ್ಕೆ ತೆರಳಿರುವದೇ ದುರಂತ ಅಂತ್ಯಕ್ಕೆ ಕಾರಣ ಎನ್ನಲಾಗಿದೆ. ಇದೀಗ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಜಾಗದಲ್ಲಿಯೇ ಎರಡು ವರ್ಷಗಳ ಹಿಂದೆ ಈಜು ಬಲ್ಲ ವ್ಯಕ್ತಿಯೇ ಮುಳುಗಿ ಸತ್ತಿರುವದಾಗಿ ದುಬಾರೆ ಅರಣ್ಯ ಇಲಾಖೆ ಮೂಲಗಳು ದೃಢಪಡಿಸಿವೆ.

-ಟಿ.ಎಲ್. ಶ್ರೀನಿವಾಸ್