ಸೋಮವಾರಪೇಟೆ, ಮಾ. 15: ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ಉದ್ಯಮಿ ಹರಪಳ್ಳಿ ರವೀಂದ್ರ ಹೇಳಿದರು.
ನಗರಳ್ಳಿ ಹೆಮ್ಮನಗದ್ದೆ ಗ್ರಾಮದಲ್ಲಿ ಆಯೋಜಿಸಿದ್ದ ಶಾಂತಳ್ಳಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ, ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಕ್ರೀಡಾಪಟುಗಳು ಅನೇಕ ಸಾಧನೆ ಮಾಡಿದ್ದಾರೆ. ತಾಯ್ನಾಡಿಗೆ ಕೀರ್ತಿ ತಂದಿದ್ದಾರೆ. ಮಕ್ಕಳನ್ನು ಪಠ್ಯದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಬಡ್ಡಿ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಪ್ರಮುಖರಾದ ಡಿ.ಎಸ್. ಪೊನ್ನಪ್ಪ, ಡಿ.ಎಸ್. ಬೆಳ್ಳಿಯಪ್ಪ, ಎನ್.ಎಂ. ಕಾಳಪ್ಪ ಇದ್ದರು.