ಮಡಿಕೇರಿ ಮಾ. 15: ಮೇಕೇರಿಯ ಸುಭಾಷ್ ನಗರದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಮೇಕೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ನೇತೃತ್ವದಲ್ಲಿ ಪದಾಧಿಕಾರಿಗಳು, ಸದಸ್ಯರು ಹಾಗೂ ಟವರ್ ಪರ ಗ್ರಾಮಸ್ಥರು ಗ್ರಾ.ಪಂ.ಗೆ ತೆರಳಿ ನಿರಾಕ್ಷೇಪಣಾ ಪತ್ರ ನೀಡಲು ಗ್ರಾ.ಪಂ ವಿನಾಕಾರಣ ನಿರಾಕರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಕೇರಿ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಿಸಲು ಖಾಸಗಿ ಮೊಬೈಲ್ ಕಂಪೆನಿಯೊಂದು ಮುಂದೆ ಬಂದಿದ್ದು, ಇದಕ್ಕೆ ಸ್ಥಳೀಯ ನಿವಾಸಿ ಹೆಚ್.ಸಿ. ಪೊನ್ನಪ್ಪ ಅವರು ಜಾಗ ನೀಡಲು ಮುಂದಾಗಿದ್ದಾರೆ. ಗ್ರಾಮಸ್ಥರು ಹಾಗೂ ಪಂಚಾಯಿತಿ ಆಡಳಿತ ಮಂಡಳಿಯ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದ್ದರೂ, ನಿರಾಕ್ಷೇಪಣಾ ಪತ್ರ ನೀಡದೆ ಸತಾಯಿಸಲಾಗುತ್ತಿದೆ ಎಂದು ದಿವಾಕರ್ ಆರೋಪಿಸಿದರು.
ಮೇಕೇರಿಯಲ್ಲಿ ಟವರ್ ನಿರ್ಮಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ 4-5 ಗ್ರಾಮಗಳ ನಿವಾಸಿಗಳಿಗೆ ಅನುಕೂಲವೇ ಹೊರತು ಯಾವುದೇ ತೊಂದರೆಯಾಗುವುದಿಲ್ಲ.
ಮುಂದಿನ ಒಂದು ವಾರದೊಳಗೆ ಟವರ್ ಅಳವಡಿಕೆಗೆ ಅನುಮತಿ ನೀಡದಿದ್ದಲ್ಲಿ ಗ್ರಾ.ಪಂ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ದಿವಾಕರ್ ಎಚ್ಚರಿಕೆ ನೀಡಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸಮಿತಿಯ ಪ್ರಮುಖರು ಮನವಿ ಸಲ್ಲಿಸಿದ್ದರು. ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್, ಪ್ರಮುಖರಾದ ಸಿದ್ದೇಶ್ವರ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.