*ಸಿದ್ದಾಪುರ, ಮಾ. 15: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಕಾಮಗಾರಿಗಳನ್ನು ನಡೆಸುವ ಮೂಲಕ ಸರ್ಕಾರದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಆರೋಪಿಸಿದ್ದಾರೆ.

ನೀರಿನ ಟ್ಯಾಂಕ್ ಮತ್ತು ಪೈಸಾರಿ ಕಲ್ಲುಮಂಟಿ ನೀರಿನ ಟ್ಯಾಂಕ್ ದುರಸ್ತಿ ಕಾರ್ಯ ಮಾಡಲಾಗಿದ್ದು, ಕಾಮಗಾರಿಗಾಗಿ ಒಂಟಿಯಂಗಡಿ ತೋಡಿನಿಂದ ಮರಳು ತೆಗೆದು ಉಪಯೋಗಿಸಿದ್ದಾರೆ. ಗ್ರಾ.ಪಂ. ನೂತನ ಕಟ್ಟಡ ನಿರ್ಮಾಣಕ್ಕಾಗಿ ಉದ್ಯೋಗ ಖಾತ್ರಿ ಯೊಜನೆಯಡಿ 18 ಲಕ್ಷ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದರೂ; ಹಳೆಯ ಕಟ್ಟಡದ ದುರಸ್ತಿ ಕಾರ್ಯಕ್ಕೆ ಬೇರೆ ಹಣ ಮೀಸಲಿಟ್ಟು ಪಿಡಿಒ ಅನಿಲ್ ಕುಮಾರ್ ಅವರೇ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿ ದ್ದಾರೆ. ಹೊಸ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ಇದ್ದರೂ ಹಳೆಯ ಕಟ್ಟಡಕ್ಕೆ ಹಣ ವ್ಯಯ ಮಾಡಿರುವುದು ನಿಯಮಬಾಹಿರ ಕ್ರಮವಾಗಿದೆ. ಅಗತ್ಯವಿಲ್ಲದ ಕಾಮಗಾರಿ ಗಳನ್ನು ತಮ್ಮ ಅನುಕೂಲಕ್ಕಾಗಿ ಕೈಗೆತ್ತಿಕೊಳ್ಳುತ್ತಿರುವ ಅಭಿವೃದ್ಧಿ ಅಧಿಕಾರಿ ಸದಸ್ಯರು ಸೂಚಿಸಿದ ಕಾರ್ಯವನ್ನು ಮಾಡದೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಒಟ್ಟಿನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ತಮ್ಮ ಕಾರ್ಯ ನಿರ್ವಹಿಸುವ ಬದಲು ಗುತ್ತಿಗೆ ದಾರರಾಗಿ ಹೆಚ್ಚು ಚಟುವಟಿಕೆಯಿಂದ ಇರುವುದಲ್ಲದೆ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅಂಚೆಮನೆ ಸುಧಿ ಆರೋಪಿಸಿದ್ದಾರೆ.