ಸೋಮವಾರಪೇಟೆ, ಮಾ. 14: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಾಲಯದ ಉದ್ಘಾಟನೆ ಹಾಗೂ ಶ್ರೀ ಬಸವೇಶ್ವರ, ಶ್ರೀ ಗಣಪತಿ ಹಾಗೂ ಶ್ರೀ ವನದುರ್ಗಾಪರಮೇಶ್ವರಿ ದೇವರುಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಸಭಾ ಕಾರ್ಯಕ್ರಮವನ್ನು ಬಸವಾಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಜಗತ್ತಿಗೆ ಶಾಂತಿ ಮತ್ತು ಪ್ರೀತಿಯನ್ನು ನೀಡುತ್ತಿರುವ ಏಕೈಕ ದೇಶ ಭಾರತವಾಗಿದ್ದು, ದೇವಾಲಯಗಳೇ ದೇಶದ ಜೀವಾಳ ಎಂದರು.
ಒಂದಿಲ್ಲೊಂದು ಚಿಂತನೆಯಲ್ಲಿ ಸಿಲುಕಿರುವ ಜನರು ತನ್ನನ್ನೇ ತಾನು ಮರೆಯುತ್ತಿದ್ದಾನೆ. ಮತ್ತೊಬ್ಬರನ್ನು ಮೆಚ್ಚಿಸಲು ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳದೆ, ದೇವರು ಮೆಚ್ಚುವಂತಹ ಕೆಲಸ ಮಾಡಬೇಕಿದೆ. ಸಮಾಜದಲ್ಲಿ ದೇವಾಲಯಕ್ಕೆ ನೀಡುತ್ತಿರುವ ಮಹತ್ವದಂತೆ, ನಮ್ಮೊಳಗಿನ ದೇವಾಲಯದ ಸ್ವಚ್ಛತೆಗೂ ಆದ್ಯತೆ ನೀಡಬೇಕೆಂದರು.
ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ದೇವಾಲಯಗಳಲ್ಲಿ ನಿರಾಕಾರ ಭಗವಂತನನ್ನು ಕಾಣಬಹುದು. ಅದರಂತೆ, ಎಲ್ಲಾ ಜೀವಿಗಳಲ್ಲೂ ಪರಮಾತ್ಮನ ಅಂಶವಿದೆ. ಜೀವಾತ್ಮದ ಅಹಂಕಾರಕ್ಕೆ ನಮ್ಮ ಅಜ್ಞಾನ ಕಾರಣವಾಗಿದೆ.
ಆದರೆ, ಜ್ಞಾನಕ್ಕೆ ಆದಿ ಮತ್ತು ಅಂತ್ಯ ಇರುವದಿಲ್ಲ. ಆಧ್ಯಾತ್ಮದ ಚಿಂತನೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವದರಿಂದ ಪರಮಾತ್ಮನನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಯಾವದೇ ದೇವಸ್ಥಾನ ನಿರ್ಮಿಸಲು ಹೆಚ್ಚಿನ ಶ್ರಮದ ಅಗತ್ಯವಿದೆ. ಶ್ರದ್ಧೆ, ಭಕ್ತಿ ಇದ್ದಲ್ಲಿ ಮಾತ್ರ ದೇವರ ಅನುಗ್ರಹ ಪಡೆಯಲು ಸಾಧ್ಯ ಎಂದರು.
ದೇವಾಲಯ ಉದ್ಘಾಟನೆ ಅಂಗವಾಗಿ ತಾ. 11ರಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಿತು. ಬುಧವಾರ ಬೆಳಿಗ್ಗೆ 9 ರಿಂದ ವಿವಿಧ ಪೂಜಾ ಕಾರ್ಯಗಳು ಹಾಗೂ ಸಂಜೆ 4.30ಕ್ಕೆ ಸರ್ವತೋಮಂಡಲ ರಚನೆ ನಿರೀಕ್ಷಣೆ, ಬ್ರಹ್ಮಕಲಶ ಸ್ಥಾಪನೆ, ಬಿಂಬಸುದ್ಧಿ ಮತ್ತಿತರ ಕಾರ್ಯಕ್ರಮಗಳು ನಡೆಯಿತು.
ತಾ. 12ರ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಆಶ್ಲೇಷ ಬಲಿ ಪೂಜೆ ಸೇರಿದಂತೆ ವಿವಿಧ ಪೂಜೆಗಳು ನಡೆಯಿತು. ಪೂಜಾಕಾರ್ಯದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಪಾಲ್ಗೊಂಡಿದ್ದರು.
ತಾ. 13 ರಂದು ಶುಕ್ರವಾರ ಬೆಳಿಗ್ಗೆ 7 ರಿಂದ ಚತುರ್ದವ್ಯ ಮಹಾಗಣಪತಿ ಮತ್ತು ವನದುರ್ಗಿಹೋಮ ನಡೆಯಿತು. 10.15ಕ್ಕೆ ವಿಗ್ರಹ ಪ್ರತಿಷ್ಠಾಪನೆ. 11.30ಕ್ಕೆ ಮಹಾಪೂಜೆ ನಡೆಯಿತು. ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯ ದಿವ್ಯ ಸಾನ್ನಿಧ್ಯದಲ್ಲಿ ದೇವಾಲಯದ ಕಳಸ ಪ್ರತಿಷ್ಠಾಪನೆ ನೆರವೇರಿತು.
ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಾಸನದ ಜವೇನಳ್ಳಿ ಮಠದ ಸಂಗಮೇಶ್ವÀರ ಸ್ವಾಮೀಜಿ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ, ಹಾನಗಲ್ಲು ಗ್ರಾಮದ ಕಾಫಿ ಬೆಳೆಗಾರರಾದ ಎಚ್.ಎಂ. ಬಸಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ. ಮಾದಪ್ಪ, ಕಟ್ಟಡ ವಿನ್ಯಾಸಕ ಆಡಿನಾಡೂರು ಮೋಹನ, ಅರ್ಚಕ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.