ವೀರಾಜಪೇಟೆ, ಮಾ. 13: ಬಾಳುಗೋಡುವಿನ ಫೆಡರೇಷನ್ ಆಫ್ ಕೊಡವ ಸಮಾಜದ ಕ್ರೀಡಾಂಗಣದಲ್ಲಿ ಏಪ್ರಿಲ್ 19ರಿಂದ ಮೇ 17ರವರೆಗೆ ನಡೆಯುವ ಮುಕ್ಕಾಟಿರ ಕಪ್ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸರಕಾರದಿಂದ 50 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹಾಕಿ ಪಂದ್ಯಾಟದ ಅಧ್ಯಕ್ಷ ಮುಕ್ಕಾಟಿರ ಮೋಟು ಉತ್ತಯ್ಯ ಹೇಳಿದರು.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರ ನೇತೃತ್ವದಲ್ಲಿ (ಮೊದಲ ಪುಟದಿಂದ) ಮುಖ್ಯಮಂತ್ರಿಯನ್ನು ಭೇಟಿಮಾಡಿ ಹಾಕಿ ಪಂದ್ಯಾವಳಿಗೆ ಅಂದಾಜು ರೂ. 1 ಕೋಟಿ ವೆಚ್ಚವಾಗಲಿರುವ ಬಗ್ಗೆ ಮಾಹಿತಿ ನೀಡಿದಾಗ ಸರ್ಕಾರದಿಂದ ರೂ. 50 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಬಾರಿ 300ಕ್ಕೂ ಅಧಿಕ ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಜಿಲ್ಲೆಯಾದ್ಯಂತ ಆಯಾಯ ಭಾಗಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸ್ಥಳಗಳನ್ನು ನಿಗದಿಮಾಡಲಾಗಿದೆ. ಹೆಸರು ನೋಂದಾಯಿಸಿಕೊಳ್ಳಲು ತಾ. 29 ಕಡೆಯ ದಿನವಾಗಿದೆ. ಪಂದ್ಯಾಟಕ್ಕಾಗಿ ಮೂರು ಮ್ಯೆದಾನಗಳನ್ನು ಸಜ್ಜು ಗೊಳಿಸಲಾಗುತ್ತಿದ್ದು, ಒಂದು ದಿನದಲ್ಲಿ 18 ತಂಡಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಾಧ್ಯಕ್ಷ ರೋಹಿತ್ ಸುಬ್ಬಯ್ಯ ಮಾತನಾಡಿ, ಪಂದ್ಯಾಟದ ಪ್ರಥಮ ಬಹುಮಾನ ಮೂರು ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ ರೂ. 2 ಲಕ್ಷ ಟ್ರೋಫಿ, ತೃತೀಯ ರೂ. 1 ಲಕ್ಷ ಟ್ರೋಫಿ ನೀಡಲಾಗುವುದು. ಅಲ್ಲದೆ ಕ್ವಾಟರ್ ಫೈನಲ್ಸ್ ತಲುಪಿದ 5 ತಂಡಗಳಿಗೆ ತಲಾ ರೂ. 50 ಸಾವಿರ ನಗದು ನೀಡಲಾಗುವುದು. ಪಂದ್ಯಾಟದ ತೀರ್ಪುಗಾರಿಕೆಯನ್ನು ಕೊಡವ ಹಾಕಿ ಅಕಾಡೆಮಿ ನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು. ದೇಶದಾದ್ಯಂತ ಕೊರೊನಾ ವೈರಸ್ ಬಗ್ಗೆ ಸರ್ಕಾರ ಹಾಗೂ ಕೊಡವ ಹಾಕಿ ಅಕಾಡೆಮಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು. ಗೋಷ್ಠಿಯಲ್ಲಿ ನಿರ್ದೇಶಕ ಕರುಂಬಯ್ಯ ಉಪಸ್ಥಿತರಿದ್ದರು.