ಸೋಮವಾರಪೇಟೆ: ಕೊರೊನ ವೈರಸ್ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ನಿನ್ನೆ ತೆಗೆದುಕೊಂಡ ದಿಢೀರ್ ನಿರ್ಧಾರದಿಂದಾಗಿ ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸ್ಪಷ್ಟ ಮಾಹಿತಿಯ ಕೊರತೆಯಿಂದಾಗಿ ಹಲವಷ್ಟು ಗೊಂದಲಗಳಿಗೆ ಕಾರಣವಾಗಿದೆ.

ಪರೀಕ್ಷಾ ಸಮಯದಲ್ಲಿಯೇ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜಿಗೆ ರಜೆ ಘೋಷಣೆಯಾಗಿದ್ದರಿಂದ ಪೋಷಕ ವರ್ಗದಲ್ಲಿ ಗೊಂದಲ ಮೂಡಿತು. ಪರೀಕ್ಷೆಗಳು ಎಂದಿನಂತೆ ನಡೆಯುತ್ತವೆಯೇ? ಇಲ್ಲವೇ ಎಂಬ ಬಗ್ಗೆ ಸಂಶಯವೂ ಮೂಡುವಂತಾಯಿತು.

ಕೊರೊನಾ ಸೋಂಕು ಹರಡದಂತೆ ಸರ್ಕಾರವು ಕೆಲವೊಂದು ಕಾರ್ಯಕ್ರಮಗಳು, ಆಚರಣೆಗಳು, ಸಭೆ ಸಮಾರಂಭಗಳನ್ನು ರದ್ದುಗೊಳಿಸಿರುವದರಿಂದ ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮಗಳ ಮೇಲೆ ಕಾರ್ಮೋಡ ಕವಿದಿದೆ.

ಇಲ್ಲಿನ ಗೌಡ ಸಮಾಜದಲ್ಲಿ ತಾ. 15ರಂದು ಮದುವೆ ನಿಗದಿಯಾಗಿದ್ದು, ಕುಟುಂಬಸ್ಥರು, ಹಿತೈಷಿಗಳು ಮಾತ್ರ ಭಾಗವಹಿಸುವದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ. ತಾ. 16ಕ್ಕೆ ನಿಗದಿಯಾಗಿದ್ದ ತಿಥಿ ಕಾರ್ಯಕ್ರಮ ರದ್ದುಗೊಂಡಿದೆ. ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿಯೂ ನಿಗದಿಯಾಗಿದ್ದ ಮದುವೆ ಸಮಾರಂಭಕ್ಕೆ ಆಗಮಿಸುವ ಆಮಂತ್ರಿತರ ಸಂಖ್ಯೆಯನ್ನು ಕಡಿಮೆ ಮಾಡಲು ಆಯೋಜಕರು ಮುಂದಾಗಿದ್ದಾರೆ.

ಇನ್ನು ಕೊಡವ ಸಮಾಜದಲ್ಲಿ ತಾ. 15 ಮತ್ತು 16ರಂದು ಮದುವೆ ಮತ್ತು ಸಂಘವೊಂದರ ವಾರ್ಷಿಕ ಸಭೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ದಿಢೀರ್ ನಿರ್ಧಾರದಿಂದ ಏನು ಮಾಡಬೇಕೆಂಬದೇ ತಿಳಿಯುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಮಾನಸ ಸಭಾಂಗಣದಲ್ಲಿ ಸದ್ಯದ ಒಂದು ವಾರದ ಮಟ್ಟಿಗೆ ಯಾವದೇ ಕಾರ್ಯಕ್ರಮ ನಿಗದಿಯಾಗಿಲ್ಲ. ಇನ್ನು ಗ್ರಾಮೀಣ ಭಾಗದ ಕೆಲವೆಡೆ ಮದುವೆ, ನಾಮಕರಣ, ಗೃಹಪ್ರವೇಶದಂತಹ ಕಾರ್ಯಕ್ರಮಗಳು ನಿಗದಿಯಾಗಿದ್ದು, ಅನಿವಾರ್ಯವಾಗಿ ಆಹ್ವಾನವನ್ನು ಕಡಿಮೆ ಮಾಡಲೇಬೇಕಾಗಿದೆ.

ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಆಗಮಿಸುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ವಾರದ ಕೊನೆಯ ದಿನಗಳಲ್ಲಿ ಕನಿಷ್ಟ 200 ಮಂದಿಯಾದರೂ ಭೇಟಿ ನೀಡುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ಪ್ರವಾಸಿಗರು ಆಗಮಿಸುತ್ತಿಲ್ಲ. 30 ರಿಂದ 50 ಮಂದಿ ಆಗಮಿಸಿದರೇ ಹೆಚ್ಚು ಎಂಬಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರ ತಪಾಸಣೆಗಾಗಿಯೇ ಪ್ರತ್ಯೇಕ ವಾರ್ಡ್‍ನ್ನು ತೆರೆಯಲಾಗಿದ್ದು, ಅಗತ್ಯ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡಲು ವೈದ್ಯರು ಹಾಗೂ ಶುಶ್ರೂಷಕಿಯರು ಸಿದ್ದರಾಗಿದ್ದಾರೆ. ಕೊರೊನಾ ಭೀತಿಯ ಹಿನ್ನೆಲೆ ಪಟ್ಟಣದಲ್ಲಿ ಜನಸಂಚಾರ ವಿರಳವಾಗುತ್ತಿದೆ. ‘ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ’ ಎಂಬ ಮಾಹಿತಿ ನಿನ್ನೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹಡಿದಾಡಿದ್ದರಿಂದ ಜನಸಾಮಾನ್ಯರು ಗೊಂದಲಕ್ಕೀಡಾಗಿದ್ದರು.

ಪಟ್ಟಣದ ಹೊಟೇಲ್, ಅಂಗಡಿ ಮುಂಗಟ್ಟುಗಳು, ಮಾಂಸ-ಮೀನು ಮಾರಾಟ ಕೇಂದ್ರಗಳಿಗೆ ‘ಕೊರೊನಾ ಸೋಂಕು’ ಹೊಡೆತ ನೀಡಿದೆ. ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ವ್ಯಾಪಾರ ವಹಿವಾಟು ನಷ್ಟವಾಗುತ್ತಿದೆ. ಬಸ್, ಆಟೋಗಳಲ್ಲಿ ಸಂಚರಿಸುವವರೂ ಕಡಿಮೆಯಾಗಿದ್ದಾರೆ.

ಉಳಿದಂತೆ ಜನಜೀವನ ಸಹಜ ಸ್ಥಿತಿಯಲ್ಲಿದ್ದು, ವಿದೇಶದಿಂದ ವಾಪಸ್ಸಾಗಿರುವ ಮಂದಿಯನ್ನು ಸಂಶಯದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸೋಮವಾರಪೇಟೆಗೆ ವಿದೇಶದಿಂದ ಆಗಮಿಸಿದ್ದ ವ್ಯಕ್ತಿಯೋರ್ವರನ್ನು ತಪಾಸಣೆಗೆ ಒಳಪಡಿಸಲಾಗಿದ್ದರೂ, ಈ ವ್ಯಕ್ತಿಗೆ ಕೊರೊನಾ ಸೋಂಕು ಇದೆಯೇ ಇಲ್ಲವೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಮಧ್ಯೆ ಕೊಡಗಿನಲ್ಲಿ ಒಂದು ಕೊರೊನಾ ಸೋಂಕು ಪತ್ತೆಯಾಗಿರುವದನ್ನು ಸರ್ಕಾರವೇ ದೃಢಪಡಿಸಿದೆ. ಕೊರೊನಾ ಸೋಂಕಿತ ವ್ಯಕ್ತಿಯ ಮಾಹಿತಿಯನ್ನು ಗೌಪ್ಯವಾಗಿಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ. ಇಲ್ಲಿನ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವಸತಿ ಶಾಲೆಯಲ್ಲಿ 116 ವಿದ್ಯಾರ್ಥಿಗಳಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ನಿನ್ನೆ ಆರೋಗ್ಯ ಇಲಾಖೆಯಿಂದ ಎಲ್ಲಾ ವಿದ್ಯಾರ್ಥಿಗಳ ರಕ್ತಪರೀಕ್ಷೆಯೊಂದಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ.

ಮಕ್ಕಳಿಗೆ ಪರೀಕ್ಷೆ

6,7 ಮತ್ತು 8 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 6 ಮತ್ತು 8 ನೇ ತರಗತಿಗಳ ಪರೀಕ್ಷೆ ತಾ. 15ರಂದು ಮುಕ್ತಾಯಗೊಳ್ಳಲಿದೆ. ನಂತರ ಅವರಿಗೆ ರಜೆ ನೀಡಿ ಮನೆಗೆ ಕಳುಹಿಸಲಾಗುವದು. 7ನೇ ತರಗತಿ ವಿದ್ಯಾರ್ಥಿಗಳಿಗೆ ತಾ.21ರವರೆಗೆ ಪರೀಕ್ಷೆ ನಡೆಯಲಿದ್ದು, ನಂತರ ರಜೆ ನೀಡಲಾಗುವದು. ಇದರೊಂದಿಗೆ ಕೊರೊನಾ ವೈರಸ್ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ . ಪದವಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಮುಂದುವರಿದಿದೆ.

ಕೋಟೆಬೆಟ್ಟ ಪ್ರವೇಶ ನಿಷೇಧ: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ತಾಣವಾಗಿರುವ ಕೋಟೆಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕನ್ನಿಗಂಡ ಸುಭಾಷ್ ತಿಳಿಸಿದ್ದಾರೆ.

ಪ್ರವಾಸಿಗಳಿಲ್ಲ

ಕೊರೊನಾ ಭೀತಿ ಹಿನ್ನೆಲೆ ಟೂರಿಸ್ಟ್‍ಗಳು ಯಾರೂ ಬರುತ್ತಿಲ್ಲ. ಕಾರ್ಯಕ್ರಮಗಳಿಗೂ ಜನ ಬರುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನ ಒಳ್ಳೆಯದೇ. ಒಂದು ವಾರಗಳ ಕಾಲ ಎಲ್ಲವನ್ನೂ ಸಹಿಸಿಕೊಳ್ಳಬೇಕು. ವಿದೇಶದಿಂದ ಬರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಬರುತ್ತಿದೆ. ಇವರುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಸೋಂಕು ಇಳಿಮುಖ ಆಗುವವರೆಗೆ ಅಲ್ಪಮಟ್ಟಿನ ತೊಂದರೆಯಾದರೂ ಸಹಿಸಿಕೊಳ್ಳಬೇಕು ಎಂದು ಉದ್ಯಮಿ ಬಿ.ಎಸ್. ಸುಂದರ್ ತಿಳಿಸಿದ್ದಾರೆ.