ಮಡಿಕೇರಿ, ಮಾ. 13: ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎಂಬ ಪ್ರಬಲವಾದ ಬೇಡಿಕೆಯನ್ನು ಮುಂದಿರಿಸಿ ಜಿಲ್ಲೆಯ ಜನತೆ ಒಂದು ರೀತಿಯ ಆಂದೋಲನವನ್ನೇ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಸೇರಿದಂತೆ ಈ ಬಗ್ಗೆ ಸಂಬಂಧಿಸಿದ ವರೊಂದಿಗೆ ಚರ್ಚೆ - ಮನವಿಗಳನ್ನೂ ಸಲ್ಲಿಸಲಾಗುತ್ತಿರುವದು ಈ ನಿಟ್ಟಿನಲ್ಲಿ ಬೆಂಗಳೂರಿನಿಂದ ಕೊಡಗು ಜಿಲ್ಲೆಯ ತನಕ ಕೆಲವು ಯುವ ಸಂಘಟನೆಗಳು ಜಾಗೃತಿ ಜಾಥಾವನ್ನೂ ನಡೆಸಿರುವದು ಬಹುಶಃ ಎಲ್ಲರ ಗಮನಕ್ಕೆ ಬಂದಿದೆ.
ಆದರೆ ಇಂತಹ ಸನ್ನಿವೇಶದ ನಡುವೆ ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂಬದು ಇದೀಗ ಖಾತ್ರಿಯಾದಂತಿದೆ. ವಿಧಾನ ಸಭೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಅವರು ಸಲ್ಲಿಸಿದ್ದ ಪ್ರಶ್ನೆಗೆ ಅಧಿವೇಶನದ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರುವ ಬಿ. ಶ್ರೀರಾಮುಲು ಅವರು ಒದಗಿಸಿರುವ ಉತ್ತರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕತೆ ಸರಕಾರದ ಗಮನಕ್ಕೆ ಬಂದಿರುವದಿಲ್ಲ ಎಂದು ತಿಳಿಸಿರುವದು ಅಚ್ಚರಿ ದಾಯಕವಾಗಿದೆ.
ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕತೆ ಇರುವದು ಸರಕಾರದ ಗಮನಕ್ಕೆ ಬಂದಿದೆಯೇ, ಇಲ್ಲಿನ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗುತ್ತಿದ್ದು; ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿ ಬಗ್ಗೆ ಸರಕಾರ ತೆಗೆದುಕೊಂಡಿರುವ ಕ್ರಮವೇನು ಯಾವಾಗ ಮಂಜೂರಾತಿ ಮಾಡಲಾಗುವದು ಎಂದು ಶಾಸಕ ರಂಜನ್ ಪ್ರಶ್ನೆ ಮುಂದಿಟ್ಟಿದ್ದರು. ಇದಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ನೀಡಿರುವ ಲಿಖಿತ ಉತ್ತರದಲ್ಲಿ ಒಂದೇ ಮಾತಿನಲ್ಲಿ ಇದು ಸರಕಾರದ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕಾವೇರಿ ವಿವಿ ಸ್ಥಾಪನೆ ಉದ್ದೇಶ ಇಲ್ಲ
ಚಿಕ್ಕಅಳುವಾರ ಗ್ರಾಮದಲ್ಲಿರುವ ಮಂಗಳೂರು ವಿವಿ ಅಧೀನದಲ್ಲಿರುವ ಸ್ನಾತಕೋತ್ತರ ಕೇಂದ್ರದ ಬದಲು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ‘ಕಾವೇರಿ’ ಹೆಸರಿನಲ್ಲಿ ಸ್ಥಾಪನೆ ಮಾಡಲು ಸರಕಾರ ಉದ್ದೇಶಿಸಿಲ್ಲ ಎಂದು ಶಾಸಕರ ಮತ್ತೊಂದು ಪ್ರಶ್ನೆಗೆ ಉನ್ನತ ಶಿಕ್ಷಣ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ|| ಅಶ್ವಥ್ ನಾರಾಯಣ್ ಅವರು ಸ್ಪಷ್ಟನೆ ನೀಡಿದ್ದಾರೆ.