ಮಡಿಕೇರಿ, ಮಾ. 13: ಇಲ್ಲಿನ ಮಂಗಳಾದೇವಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಜರಾಜೇಶ್ವರಿ; ಮಹಾಗಣಪತಿ ಹಾಗೂ ನಾಗದೇವತೆಯ ಸನ್ನಿಧಿಯಲ್ಲಿ ನಿನ್ನೆ ರಾತ್ರಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದ ಪೂರ್ವಭಾವಿಯಾಗಿ ಇಸ್ಟಿಕಾನ್ಯಾಸ ಹಾಗೂ ಗರ್ಭಪಾತ್ರ ನ್ಯಾಸ ಹೋಮದೊಂದಿಗೆ ವಿಶೇಷ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪೊಳಲಿ ಶ್ರೀ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆದವು. ದೇವಾಲಯದ ಜೀರ್ಣೋದ್ಧಾರ ಸಮಿತಿ ವತಿಯಿಂದ ತಂತ್ರಿಗಳ ಮಾರ್ಗದರ್ಶನದಲ್ಲಿ ಈ ಅಪರೂಪದ ಕೈಂಕರ್ಯಗಳು ನೆರವೇರಿದ್ದು; ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬರುವ ಏಪ್ರಿಲ್ 26 ರಂದು ದೇವರ ಪ್ರತಿಷ್ಠಾಪನೆ ಹಾಗೂ ಆ ಮುನ್ನ ಏ. 23 ರಿಂದ 29ರ ತನಕ ಸನ್ನಿಧಿಯಲ್ಲಿ ಜರುಗಲಿರುವ ಎಲ್ಲಾ ದೇವತಾ ಕೈಂಕರ್ಯಗಳಿಗೆ ಮುಂಚಿತವಾಗಿ ಈ ವಿಧಿಗಳು ನಡೆಯಿತು. ಮುಖ್ಯವಾಗಿ ನೂತನ ಗುಡಿಯಲ್ಲಿ; ದೇವಿಯು ಪ್ರತಿಷ್ಠಾಪನೆಗೊಳ್ಳಲಿರುವ ಗರ್ಭಗುಡಿಯ ಈಶಾನ್ಯ ಮೂಲೆಯಲ್ಲಿ ಹೋಮ, ಪೂಜೆಯ ಬಳಿಕ ನವರತ್ನಾಧಿಗಳನ್ನು ಅಧಿವಾಸಗೊಳಿಸುವದರೊಂದಿಗೆ; ಸದ್ಭಕ್ತರಿಂದ ದರ್ಶನ ಮಾಡಿಸಲಾಯಿತು.

ನೂತನ ದೇವಾಲಯದೊಂದಿಗೆ ನೆರವೇರಲಿರುವ ಈ ಅಪರೂಪದ ಕ್ಷಣವನ್ನು ಸದ್ಭಕ್ತರು ಕಣ್ಮನ ತುಂಬಿಕೊಂಡರು. ತಂತ್ರಿಗಳ ನೇತೃತ್ವದಲ್ಲಿ ಒಂಭತ್ತು ಬಗೆಯ ಮಣ್ಣು, ನಾಲ್ಕು ರಂಗಿನ ತಾವರೆ ಬೇರುಗಳು, ಪಾದರಸ ಸಹಿತ ಒಂಭತ್ತು ಧಾತುಗಳು, ನವರತ್ನಗಳು, ನವಧಾನ್ಯಗಳು, ಚಿನ್ನ, ಬೆಳ್ಳಿ, ಕಬ್ಬಿಣ, ತವರ ಇತ್ಯಾದಿ ಲೋಹಗಳನ್ನು ಸುವರ್ಣ ಖಚಿತ ಸಿಂಹ, ಆಮೆ, ಶಂಖ, ಚಕ್ರ, ಬಿಲ್ಲು, ಗದೆ, ಪದ್ಮ ಇತ್ಯಾದಿ ಹನ್ನೊಂದು ಬಗೆಯನ್ನು ಕೂಡ ಸ್ಥಾಪನೆಗೊಳಿಸಲಾಯಿತು.ಆ ಬಳಿಕ ಮಹಾಪೂಜೆ, ತೀರ್ಥ ಪ್ರಸಾದದೊಂದಿಗೆ ಅನ್ನದಾನ ನಡೆಯಿತು. ತಲಕಾವೇರಿಯ ಅರ್ಚಕ ಪ್ರಶಾಂತ್ ಆಚಾರ್ ಹಾಗೂ ಗುರು ಭಟ್, ಪೊಳಲಿಯ ವೆಂಕಟೇಶ್ ತಂತ್ರಿ, ರಾಂ ಪ್ರಸಾದ್ ನಲ್ಲೂರಾಯ, ವಿಘ್ನೇಶ್ ಕಾರಂತ್ ಮೊದಲಾದವರು ದೇವತಾ ಕಾರ್ಯ ನೆರವೇರಿಸಿದರು. ದೇವಾಲಯ ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ಕೆ.ಹೆಚ್.ಚೇತನ್, ಎಂ.ಬಿ. ಅರುಣ್‍ಕುಮಾರ್, ಕೆ.ಕೆ. ಮಹೇಶ್‍ಕುಮಾರ್, ಸಿ.ಕೆ. ಸುರೇಶ್‍ಕುಮಾರ್, ಕೆ.ಆರ್. ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.