ಮಡಿಕೇರಿ, ಮಾ. 14: ಕಳೆದ ಜೂನ್ 5ರಂದು ಕುಶಾಲನಗರದ ಮಾದಪಟ್ಟಣ ಬಳಿ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಆಕಸ್ಮಿಕ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಇಂದು ಮೃತ ವಿದ್ಯಾರ್ಥಿಗಳ ಪೋಷಕರಿಗೆ ರಾಜ್ಯದ ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ ಶಾಸಕ ಕೆ.ಜಿ. ಬೋಪಯ್ಯ ಅವರು ತಲಾ ರೂ. 2 ಲಕ್ಷದಂತೆ 6 ಲಕ್ಷ ಮೊತ್ತದ ಚೆಕ್‍ಗಳನ್ನು ವಿತರಿಸಿದರು.
ಮಡಿಕೇರಿ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾದ ಎಂ.ಎಸ್. ಗಗನ್, ಶಶಾಂಕ್, ಆರ್. ಆಕಾಶ್ ಮೃತರಾಗಿದ್ದ ಮೇರೆಗೆ ಇಂದು ಪರಿಹಾರ ನಿಧಿಯನ್ನು ತಹಶೀಲ್ದಾರ್ ಮಹೇಶ್ ಸಮ್ಮುಖದಲ್ಲಿ ನೀಡಲಾಯಿತು. ಅಲ್ಲದೆ ಅನಾರೋಗ್ಯ ಚಿಕಿತ್ಸೆಗಾಗಿ ನಾಪೋಕ್ಲುವಿನ ಶಾಂತಿ ಅವರಿಗೆ ರೂ. 45 ಸಾವಿರ ಹಾಗೂ ಹೆಬ್ಬೆಟ್ಟಗೇರಿಯ ಕೆ.ಕೆ. ಕಾವೇರಿ ಅವರಿಗೆ ರೂ. 1 ಲಕ್ಷ ಪರಿಹಾರ ನಿಧಿ ಹಸ್ತಾಂತರ ಮಾಡಲಾಯಿತು. ಈ ವೇಳೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಟಿ.ಎ. ಕಿಶೋರ್‍ಕುಮಾರ್, ಕುಮುದ ರಶ್ಮಿ ಹಾಜರಿದ್ದರು.