ಹೆದ್ದಾರಿ ಸಂಚಾರಿಗಳಿಗೆ ಕಿರಿಕಿರಿ

ಕಣಿವೆ, ಮಾ. 14: ವರ್ಷ ಕಳೆದರೂ ಹೆದ್ದಾರಿ ಬದಿಯ ಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಹೊಟೇಲ್ ವಸತಿ ಗೃಹ ಸೇರಿದಂತೆ ಮನೆಗಳ ತ್ಯಾಜ್ಯ ನೀರು ಹರಿದು ಚರಂಡಿ ತುಂಬಿ ತುಳುಕುತ್ತಿದ್ದು ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ಹಾಗು ಸಾರ್ವಜನಿಕರು ಕಿರಿ ಕಿರಿ ಅನುಭವಿಸುವಂತಾಗಿದೆ. ಇದು ಕೊಡಗಿನ ಪ್ರವೇಶ ದ್ವಾರ ಕುಶಾಲನಗರದ ಕಾವೇರಿ ನದಿಯ ಸೇತುವೆ ಬಳಿಯಲ್ಲಿ ಕಂಡು ಬರುವ ಚಿತ್ರಣ. ಈ ಹೆದ್ದಾರಿಯಂಚಿನಲ್ಲಿ ಕುಶಾಲನಗರದ ಪ್ರಮುಖ ಪ್ರವಾಸಿ ಹೊಟೇಲ್‍ಗಳಿದ್ದು ನಿತ್ಯವೂ ಇಲ್ಲಿಗೆ ದೇಶದ ವಿವಿಧ ರಾಜ್ಯಗಳ ಹಾಗೂ ಹೊರದೇಶಗಳ ಪ್ರವಾಸಿಗರು ಧಾವಿಸುತ್ತಿದ್ದು ಇಲ್ಲಿ ತುಂಬಿ ತುಳುಕಿ ದುರ್ನಾತ ಬೀರುವ ಚರಂಡಿಯ ತ್ಯಾಜ್ಯ ನೀರನ್ನು ನೋಡಿ ಮೂಗು ಮುಚ್ಚುವಂತಹ ಸ್ಥಿತಿ ಎದುರಾಗಿದೆ. ಮೊದಲೇ ಕೊರೊನಾ ಭೀತಿಯಿಂದ ಮಾಸ್ಕ್ ಧರಿಸುವ ವಿದೇಶಿ ಪ್ರವಾಸಿಗರು ಈ ಚರಂಡಿಯನ್ನು ನೋಡಿ ಮುಖವನ್ನೇ ಮುಚ್ಚುವಂತಹ ದುಸ್ಥಿತಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೃಷ್ಟಿಸಿದ್ದಾರೆ. ಇಲ್ಲಿ ಪ್ರತೀ ಗಂಟೆ ಗಂಟೆಗೂ ತ್ಯಾಜ್ಯ ನೀರು ತುಂಬಿ ಸನಿಹವೇ ಇರುವ ಕಾವೇರಿ ನದಿಗೆ ನೇರವಾಗಿ ಸೇರಬಾರದು ಎಂಬ ಕಾರಣದಿಂದ ಸ್ಥಳೀಯ ಪಂಚಾಯಿತಿಯ ಟ್ರಾಕ್ಟರ್ ನಲ್ಲಿ ತುಂಬಿಸಿ ಪಟ್ಟಣದ ಹೊರಭಾಗಕ್ಕೆ ಕೊಂಡೊಯ್ದು ಸುರಿಯಲಾಗುತ್ತಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ದೂರಿಕೊಂಡ ಸ್ಥಳೀಯ ಹೊಟೇಲ್ ಉದ್ಯಮಿ ಬಾಲಣ್ಣ, ನಮಗೂ ಈ ಚರಂಡಿಯ ಅಪೂರ್ಣಗೊಂಡ ಕಾಮಗಾರಿ ತಲೆ ನೋವು ತಂದಿದೆ. ಈ ತ್ಯಾಜ್ಯ ನೀರಿನ ದುರ್ವಾಸನೆ ನಮ್ಮಲ್ಲಿಗೆ ಬರುವ ದೇಶ ವಿದೇಶಗಳ ಪ್ರವಾಸಿಗರಿಗೆ ನಮ್ಮೂರಿನ ಅಸ್ವಚ್ಛತೆಯ ಬಗ್ಗೆ ಕೆಟ್ಟ ಭಾವನೆ ಮೂಡಬಾರ ದೆಂದು ಸ್ವತಃ ಹಣ ವ್ಯಯಿಸಿ ಸಾಕಷ್ಟು ಬಾರಿ ಈ ತ್ಯಾಜ್ಯ ನೀರು ತೆಗೆದು ತೆಗೆದು ಸಾಕಾಗಿದೆ. ಒಂದು ಸಾರಿ ಈ ಕಾಮಗಾರಿ ಮುಗಿದರೇ ಸಾಕು ಎನ್ನುತ್ತಾರೆ. ಈ ಬಗ್ಗೆ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಅವರಲ್ಲಿ ಮಾಹಿತಿ ಕೋರಿದಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೆದ್ದಾರಿಯನ್ನು ಕತ್ತರಿಸಿ ಚರಂಡಿ ನಿರ್ಮಿಸಲು ಅನುಮತಿ ಕೇಳಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ನದಿ ದಂಡೆಯಲ್ಲಿ ಇಂಗು ಗುಂಡಿ ನಿರ್ಮಿಸಿ ಚರಂಡಿ ನೀರನ್ನು ಹರಿಸಲಾಗುವುದು ಎನ್ನುತ್ತಾರೆ. ಒಟ್ಟಾರೆ ಸ್ಥಳೀಯ ಪಂಚಾಯಿತಿಯಾದರೂ ಸರಿ, ಹೆದ್ದಾರಿ ಪ್ರಾಧಿಕಾರದವ ರಾದರೂ ಸರಿ ಬೇಗನೇ ಚರಂಡಿಯ ಕಾಮಗಾರಿ ಪೂರ್ಣಗೊಳಿಸಿ ವಾಸನೆ ಬಾರದಂತೆ ಊರಿನ ಗೌರವ ಎತ್ತಿ ಹಿಡಿಯಬೇಕಿದೆ ಅಷ್ಟೇ. - ಕೆಎಸ್. ಮೂರ್ತಿ