ವಿಶೇಷ ವರದಿ: ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಮಾ. 14: ತನ್ನ ಗ್ರಾಮದ ಜನತೆಯೊಂದಿಗೆ ಬೆರೆಯುತ್ತ ಗ್ರಾಮದ ಅಭಿವೃದ್ಧಿಯತ್ತ ಹೆಚ್ಚಿನ ನಿಗಾವಹಿಸುವ ಮೂಲಕ ಗ್ರಾಮದಲ್ಲಿ ಸ್ನೇಹಜೀವಿಯಾಗಿರುವ ಜೀವನ ಸಾಗಿಸುತ್ತಿರುವ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ತನ್ನ ಸ್ವಪ್ರಯತ್ನದಿಂದ ಜನಪ್ರತಿನಿಧಿಗಳ ಸಹಕಾರ ಪಡೆದು ಪೋಲಾಗುತ್ತಿದ್ದ ನೀರನ್ನು ಸಂಗ್ರಹಿಸಿ ಬೇಸಿಗೆ ಸಮಯದಲ್ಲಿ ರೈತರಿಗೆ ಈ ನೀರನ್ನು ಬಳಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಮಾಜಮುಖಿ ಪ್ರಯತ್ನ ದಿಂದ ಬಾಳೆಲೆ ಹೋಬಳಿಯ ನೂರಾರು ಕಾಫಿ, ಭತ್ತ ಬೆಳೆಯುವ ರೈತರಿಗೆ ಇದೀಗ ಬಿರು ಬೇಸಿಗೆಯಲ್ಲಿಯೂ ಯತೇಚ್ಚವಾಗಿ ನೀರು ಲಭ್ಯವಾಗುತ್ತಿದ್ದು ಅನ್ನದಾತ ರೈತ ಎರಡನೇ ಬೆಳೆಯನ್ನು ಬೆಳೆಯುವ ಕಾರ್ಯದಲ್ಲಿ ತೊಡಗಿದ್ದಾನೆ. ನದಿಗೆ ತಡೆಗೋಡೆ ನಿರ್ಮಿಸಿ ನೀರನ್ನು ಶೇಖರಿಸುವ ಮೂಲಕ ಈ ಭಾಗದ ನೂರಾರು ರೈತರಿಗೆ ಮಾದರಿಯಾಗಿದ್ದಾರೆ.