ಸುಂಟಿಕೊಪ್ಪ, ಮಾ. 13: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದ ರೂ. 5 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಮುಂಭಾಗದ ಆವರಣಕ್ಕೆ ಮತ್ತು ರಸ್ತೆಗೆ ಕಾಂಕ್ರಿಟ್ ಹಾಕಲಾಗಿದ್ದು, ಇದರ ಆಯಸ್ಸು ಎಷ್ಟು ವರ್ಷ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸುಂಟಿಕೊಪ್ಪ ಹೋಬಳಿ ಕೇಂದ್ರದ ಸರಕಾರಿ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ಆಸ್ಪತ್ರೆಗೆ ನಡೆದುಕೊಂಡು ಬರಲು ರಸ್ತೆ ಹಾಳಾಗಿದ್ದು, ಗ್ರಾಮಸ್ಥರ ಬೇಡಿಕೆಯಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಇದಕ್ಕೆ 21 ದಿನಗಳ ಕಾಲ (ಕ್ಯೂರಿಂಗ್) ತೇವದಲ್ಲಿಡಬೇಕು. ಆದರೆ ಇಲ್ಲಿ ಕಾಂಕ್ರಿಟ್ ಮಾಡಿದ ಮೇಲೆ ಇದಕ್ಕೆ ನೀರು ಹಾಕಿಲ್ಲಾ. ಇದುವರೆಗೆ ಗುತ್ತಿಗೆದಾರ ಅಥವಾ ಸಂಬಂಧಿಸಿದ ಇಂಜಿನಿಯರ್ ಇತ್ತ ಕಡೆ ತಲೆ ಹಾಕಿಲ್ಲ. ಈ ರಸ್ತೆ ಮತ್ತು ಆವರಣ ಎಷ್ಟು ದಿನ ಬಾಳಿಕೆ ಬರಬಹುದು ಎಂಬದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯವರು ಕೆಲಸದ ಪರಿಶೀಲನೆಯು ನಡೆಸಿಲ್ಲ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.