ಮಡಿಕೇರಿ, ಮಾ. 13: ಕೊಡಗು ಜಿಲ್ಲೆಯ ಮೂಲ ನಿವಾಸಿಗಳ ಸಂಸ್ಕೃತಿ ಜಗತ್ತಿನಲ್ಲೇ ಅತಿ ವಿಶಿಷ್ಟವಾಗಿದ್ದು ಇದಕ್ಕೆ ಐರಿ ಜನಾಂಗದ ಕೊಡುಗೆ ಅಪಾರ ಎಂದು ಕೊಡಗು ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಅರಮೇರಿ ಸಮೀಪದ ಐರಿ ಸಮಾಜದ ಆಸ್ತಿಯಲ್ಲಿ 2019-20ನೇ ಸಾಲಿನ ಕೊಡಗು ಐರಿ ಸಮಾಜದ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಮೇಶ್, ಜನಾಂಗದ ಏಳಿಗೆಗಾಗಿ ಎಲ್ಲಾ ಐರಿ ಮನೆತನಗಳು ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದರು. ಅರಮೇರಿ ಬಳಿ ಖರೀದಿಸಲಾಗಿರುವ ಒಂದೂವರೆ ಏಕರೆ ಜಾಗದಲ್ಲಿ ಐರಿ ಸಮಾಜದ ಕಟ್ಟಡ ನಿರ್ಮಾಣ ಮಾಡಬೇಕಾಗಿದ್ದು ಇದಕ್ಕೆ ಸಮಾಜ ಬಾಂಧವರು ನೆರವು ನೀಡುವಂತೆ ಕೋರಿದರು.
ಕೊಡಗು ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಮಾತನಾಡಿ ಕೊಡವ ಭಾಷಿಕರ ಒಡವೆ, ಆಯುಧಗಳು, ದೇವಸ್ಥಾನಗಳು ಮತ್ತು ಐನ್ ಮನೆಗಳು ಐರಿ ಜನಾಂಗದ ಕೊಡುಗೆಯಾಗಿದ್ದು ಇದನ್ನು ಗುರುತಿಸುವಂತಹ ಕೆಲಸವಾಗಬೇಕಿದೆ ಎಂದರು.
ಕೊಡಗು ಐರಿ ಸಮಾಜದ ವಾರ್ಷಿಕ ಸಭೆಯಲ್ಲಿ ಸಮಾಜ ಬಾಂಧವರ ಏಳಿಗೆ ನಿಟ್ಟಿನಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮೇಲತ್ತಂಡ ರಮೇಶ್ ನೇತೃತ್ವದ ಈಗಿರುವ ಆಡಳಿತ ಮಂಡಳಿಯನ್ನೇ ಮುಂದಿನ ಅವಧಿಗೂ ಮುಂದುವರಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಜೊತೆಗೆ ನಿವೃತ್ತ ಡಿವೈಎಸ್ಪಿ ತಟ್ಟಂಡ ಕುಶಾಲಪ್ಪ, ಉರಗ ತಜ್ಞ ಪೊನ್ನೀರ ಸ್ನೇಕ್ ಗಗನ್, ಹಿರಿಯ ಶಿಕ್ಷಕಿ ಮುಲ್ಲೈರೀರ ಹೇಮಾವತಿ ಹಾಗೂ ಪತ್ರಕರ್ತ ಐಮಂಡ ಗೋಪಾಲ್ ಸೋಮಯ್ಯ ಅವರನ್ನು ಕೊಡಗು ಐರಿ ಸಮಾಜದ ನೂತನ ನಿರ್ದೇಶಕರುಗಳನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಾಧಕರಾದ ತಟ್ಟಂಡ ಹರೀಶ್ ತಮ್ಮಯ್ಯ ಹಾಗೂ ಕುಟ್ಟೈರೀರ ಸಾತ್ವಿಕ್ ಉತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಕಾಮೆಯಂಡ ಗಣೇಶ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.