ಕಣಿವೆ, ಮಾ. 13: ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನ ಪದ್ಧತಿ ಎಂಬುದು ಪ್ಯಾಷನ್ ಆಗಿ ಬೇರೂರ ತೊಡಗಿದೆ. ಯಾವ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ನೋಡಿದರೂ ಕೂಡ ಕಣ್ಣು ಹಾಯಿಸಿದಷ್ಟು ದೂರ ಹಸಿರನ್ನು ನುಂಗಿ ಮಂಗ ಮಾಯ ಮಾಡಿದ ಕಾಂಕ್ರೀಟ್ ಕಾಣ ಸಿಗುತ್ತದೆ. ಅಂದರೆ ಚರಂಡಿ, ರಸ್ತೆ, ಕಾಲು ದಾರಿ, ಪಾದಚಾರಿ ಮಾರ್ಗ ಎಲ್ಲವೂ ಕಾಂಕ್ರಿಟ್‍ಮಯ.

ಮನುಷ್ಯನಿಗೆ ಬಹು ಮುಖ್ಯವಾಗಿ ಬೇಕಾದ ಆಮ್ಲಜನಕವನ್ನು ನೀಡುವ ಗಿಡ - ಮರ, ಸಸ್ಯ ಪ್ರಬೇಧಗಳನ್ನು ಹುಡುಕಬೇಕಾದ ದುಸ್ಥಿತಿ ಎದುರಾಗಿದೆ. ಅಂದರೆ ನಗರಗಳಲ್ಲಿ ನಿವೇಶನಗಳನ್ನು ಕೊಳ್ಳಲು ಲಕ್ಷ ಲಕ್ಷ ಹಣ ಸುರಿಯುವ ಮಂದಿ, ಆ ನಿವೇಶನಗಳಲ್ಲಿ ಅವರ ಪ್ರತಿಷ್ಠೆ ಮೆರೆಸುವ ಮನೆಗಳನ್ನು ಕಟ್ಟಲು ಕೋಟಿ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಾರೆ. ಆ ಕೋಟಿ ಮನೆಯ ಅಂಗಳದಲ್ಲಿ ಒಂದಷ್ಟು ಲಕ್ಷಗಳ ಕಾರು, ಆ ಕಾರನ್ನು ನಿಲ್ಲಿಸುವ ಶೆಡ್ ನಿರ್ಮಾಣಕ್ಕೆ ಮತ್ತೊಂದಷ್ಟು ಲಕ್ಷ ಸುರಿಯುತ್ತಾರೆ. ಆದರೆ ಆ ಮನೆಯೊಳಗೆ ವಾಸ ಮಾಡುವ ಮಂದಿ ಆರೋಗ್ಯದಿಂದ ಇರಲು ಬಹು ಮುಖ್ಯವಾಗಿ ಬೇಕಾದ ಪರಿಶುದ್ಧ ಗಾಳಿಯೊಂದಿಗೆ ಆಮ್ಲಜನಕ ನೀಡುವ ಗಿಡ-ಮರಗಳನ್ನು ಬೆಳೆಸುವವರು ಮಾತ್ರ ವಿರಳಾತಿವಿರಳ. ಅಂತಹ ವಿರಳರಲ್ಲಿ ಇಡೀ ಜಿಲ್ಲೆಗೆ ಮಾದರಿ ಎಂಬಂತೆ ಕುಶಾಲನಗರದ ಕಾವೇರಿ ನದಿ ದಂಡೆಯ ಗುಮ್ಮನಕೊಲ್ಲಿ ಗ್ರಾಮದ ವಾಸಿ ‘ಜಿಸಿ’ ಎಂಬ ಮಹಿಳೆ ಔಷಧೀಯ ಗಿಡಗಳನ್ನು ಬೆಳಸುವಲ್ಲಿ ಬ್ಯುಸಿಯಾಗಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಕುಶಾಲನಗರಕ್ಕೆ ಬಂದ ಇವರು ಕಾವೇರಿ ನದಿ ತೀರದಲ್ಲಿ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಿ, ಕೊನೆಗೆ ಗುಮ್ಮನಕೊಲ್ಲಿ ಗ್ರಾಮದಲ್ಲಿ ಅರ್ಧ ಏಕರೆ ಭೂಮಿಯನ್ನು ಖರೀದಿಸಿದರು. ಆ ಅರ್ಧ ಏಕರೆಯ ಕೇವಲ ಮೂರು ಸೆಂಟು ಅಳತೆಯ ಜಾಗದಲ್ಲಿ ವಾಸಕ್ಕೆ ಒಂದು ಮನೆಯನ್ನು ಕಟ್ಟಿಕೊಂಡರು. ಬಳಿಕ ಉಳಿಕೆ ಜಾಗದಲ್ಲೆಲ್ಲಾ ಔಷಧೀಯ ಗಿಡಗಳು, ತರಹೇವಾರಿ ಹಣ್ಣು ಗಿಡಗಳು, ಬಗೆ ಬಗೆಯ ಹೂ ಬಳ್ಳಿಗಳು ಹೀಗೆ ಒಟ್ಟು 400 ಗಿಡಗಳನ್ನು ಬೆಳೆಸಿದ್ದಾರೆ. ಸುತ್ತಲೂ ಕಾಂಪೌಂಡ್ ನಿರ್ಮಿಸಿ ತಮ್ಮ ಪರಿದಿಯ ಜಾಗದೊಳಗೆ ಪಕ್ಕಾ ಸಾವಯವ ಗೊಬ್ಬರವನ್ನು ಸ್ವತಃ ತಯಾರಿಸಿ ಆ ಗಿಡಗಳನ್ನು ಪೋಷಿಸುತ್ತಿದ್ದಾರೆ. ಇನ್ನು ಮಳೆಯ ನೀರು ಪೋಲಾಗದಂತೆ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಸಂರಕ್ಷಣೆಯ ಹೊಣೆ ಹೊತ್ತ ಇವರು, ಗೃಹ ಬಳಕೆಯ ಅನುಪಯುಕ್ತ ನೀರನ್ನು ಕೂಡ ಬಳಸಿಕೊಂಡು ಆ ಸಸ್ಯೋದ್ಯಾನವನ್ನು ಹಚ್ಚ ಹಸಿರಿನ ಸುಂದರ ಹಂದರವನ್ನಾಗಿಸಿದ್ದಾರೆ. ಜಿಸಿ ಯವರ ಕೈತೋಟದಲ್ಲಿ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ಒದಗಿಸುವ ಅಗಸೆ ಗಿಡ, ಕ್ಯಾನ್ಸರ್ ನಿವಾರಕ ಸಾರ್ಸಪ್ ಹಣ್ಣಿನ ಗಿಡ, ಮಾವು, ಬೇವು, ಹಲಸು, ಸಫೋಟ, ಬಟರ್ ಫ್ರೂಟ್, ಸೀತಾ ಫಲ, ರಾಮಫಲ, ಲಕ್ಷ್ಮಣ ಫಲ, ಹನುಮಾನ್ ಫಲ, ಕಾಮಕಸ್ತೂರಿ, ತುಳಸಿ, ಥಾಯ್ ಬೆಸಿಲ್, ವಿಟಮಿನ್ ಸೊಪ್ಪು, ಜಾಸ್ಮೀನ್ ಸೊಪ್ಪಿನ ಗಿಡಮೂಲಿಕೆಗಳು, ಇನ್ನು ಮೈಸೂರು ಮಲ್ಲಿಗೆ, ಜಾಜಿ ಮಲ್ಲಿಗೆ, ರಾತ್ರಿ ರಾಣಿ ಬಳ್ಳಿ, ಸಂಪಿಗೆ ಸೇರಿದಂತೆ ಹತ್ತಾರು ಬಗೆಯ ಗಿಡಗಳ ವನರಾಶಿಯನ್ನು ಇಲ್ಲಿ ನೆಟ್ಟು ಬೆಳಸಿ ಪೋಷಿಸಲಾಗಿದೆ. ಇಲ್ಲಿನ 400 ಗಿಡ ಮರಗಳಿಗೂ ಪ್ರತ್ಯೇಕವಾದ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದ ಬಹುಭಾಗ ಸಮಯವನ್ನು ಈ ಜಿಸಿ ಯವರು ತಾವು ನಿರ್ಮಿಸಿಕೊಂಡಿರುವ ನಿಸರ್ಗ ದೇವಿಯ ಆಲಯದೊಳಗೆ ಗಿಡಗಳಿಗೆ ನೀರು ಗೊಬ್ಬರ ಹಾಕಿ, ಅವುಗಳನ್ನು ಮುಟ್ಟಿ ನೋಡುತ್ತಾ ಒಂದು ರೀತಿಯಲ್ಲಿ ಆ ಒಂದೊಂದು ಗಿಡಗಳನ್ನು ಮಗುವಿನಂತೆ ಪೋಷಿಸ ಲಾಗಿದೆ. ಈ ಗಿಡಗಳಿಂದ ಉದುರುವ ಒಣ ಹಸಿ ಎಲೆಗಳನ್ನು ನಿತ್ಯವೂ ಗುಡಿಸಿ ಆ ವನದೊಳಗೆ ನಿರ್ಮಿಸಿರುವ ಸಾವಯವ ಗೊಬ್ಬರ ತಯಾರಿಕಾ ಗುಂಡಿಗಳ ಒಳಗೆ ಹಾಕಿ ಅದರಲ್ಲಿ ತ್ಯಾಜ್ಯ ನೀರು ಹರಿಸಲಾಗುತ್ತಿದೆ. ನಂತರ ಕೆಲ ಸಮಯದ ನಂತರ ಸಿದ್ಧಗೊಂಡ ಸಾವಯವ ಗೊಬ್ಬರವನ್ನು ಮತ್ತೆ ಅದೇ ಗಿಡ ಮರಗಳ ಬುಡಕ್ಕೆ ಹಾಕಿ ಲಘು ಪೋಷಕಾಂಶಗಳನ್ನು ಮರು ಪೂರಣ ಮಾಡಲಾಗುತ್ತಿದೆ ಎನ್ನುತ್ತಾರೆ ಪ್ರಕೃತಿ ಆರಾಧಕಿ ಜಿಸಿ. ಈ ಜಿಸಿ ಗಿಡ ಮರಗಳನ್ನು ಬೆಳೆಸಿ ಆರೈಕೆ ಮಾಡುವ ಜೊತೆಗೆ ಅಕ್ಷರಂ ಎಂಬ ಹೆಸರಿನ ನರ್ಸರಿ ಶಾಲೆಯನ್ನು ತಮ್ಮ ವನದೊಳಗೆ ತೆರೆದಿದ್ದು ಇಲ್ಲಿಗೆ ದಾಖಲಾಗುವ ಮಕ್ಕಳಿಗೆ ಗುರುಕುಲ ಮಾದರಿಯ ಶಿಕ್ಷಣವನ್ನು ಎಳೆಯ ಹಂತದಲ್ಲೇ ನೀಡುತ್ತಿರುವುದು ಇಲ್ಲಿ ಗಮನಾರ್ಹವಾದ ಅಂಶ. ಇನ್ನು ಮತ್ತೊಂದು ವಿಶೇಷ ಎಂದರೆ ಇಲ್ಲಿ ಕಲಿಯುವ ಪುಟ್ಟ ಮಕ್ಕಳಿಗೆ ತಮ್ಮ ಕೈತೋಟದಲ್ಲಿನ ಪ್ರತೀ ಹೂವು, ಹಣ್ಣು ಹಾಗೂ ಔಷಧೀಯ ಗಿಡಗಳ ಬಗ್ಗೆ ಅರಿವು ಮೂಡಿಸಿ ಆ ಮಕ್ಕಳು ಗಿಡ ಮರಗಳನ್ನು ನೆಟ್ಟು ಬೆಳೆಸುವ ಚಿಂತನೆ ಮಕ್ಕಳ ಮನದಲ್ಲಿ ಚಿಗುರೊಡೆಯು ವಂತೆ ಮಾಡಲಾಗುತ್ತಿದೆ. ಅಕ್ಷರಂನಲ್ಲಿ ಕಲಿಯುವ ಮಕ್ಕಳನ್ನು ಸೂರಿನಡಿ ಕೂರಿಸದೇ ಗಿಡ ಮರಗಳ ನೆರಳಲ್ಲಿ ಕುಳ್ಳಿರಿಸಿ ಕಲಿಕೆಯ ಜೊತೆಗೆ ಆಧ್ಯಾತ್ಮವನ್ನು ಕಲಿಸಲಾಗುತ್ತಿದೆ. ಈ ಮಾದರಿ ಮಹಿಳೆ ಜಿಸಿಯವರ ಸಾಧನೆಯ ಹಿಂದೆ ಅವರ ಗುರುಗಳಾದ ನಿವೃತ್ತ ಬ್ಯಾಂಕ್ ಅಧಿಕಾರಿ ಆದರ್ಶ್ ಕೈ ಜೋಡಿಸಿ ದ್ದಾರೆ. ಪ್ರತೀ ಮನೆಗಳಲ್ಲಿ ಗಿಡ ಮರಗಳನ್ನು ಬೆಳೆಸಲೆಂದೇ ಒಂದಿಷ್ಟು ಜಾಗವನ್ನು ಮೀಸಲಿಟ್ಟು ಔಷಧೀಯ ಗಿಡಗಳು ಹಾಗೂ ಹೂ ಬಳ್ಳಿಗಳನ್ನು ನೆಟ್ಟು ಬೆಳೆಸಿ ಪೋಷಿಸಿದರೆ ಅವು ನಮ್ಮನ್ನು ಪೋಷಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಕುಸಿತಕ್ಕೆ ಮತ್ತು ಪ್ರಕೃತಿಯ ವಿಕೋಪಕ್ಕೆ ಮಾನವರಾದ ನಮ್ಮ ದುರ್ವರ್ತನೆಯೇ ಮುಖ್ಯ ಕಾರಣ ಎನ್ನುವ ಜಿಸಿ, ಭೂಮಿ ತಾಯಿ ಎಂಬ ದೇವರು ಕರುಣಿಸಿರುವ ನೀರನ್ನು ನಾವು ಹೇಗೆಲ್ಲಾ ಬೇಕೋ ಹಾಗೆಲ್ಲಾ ಅಪವ್ಯಯ ಮಾಡುತ್ತಿದ್ದೇವೆ. ಇನ್ನು ಕಂಡ ಕಂಡಲ್ಲಿ ಮರಗಳನ್ನು ಕತ್ತರಿಸಿ ಸಾಗಿಸುವುದೇ ಕಾಣ ಸಿಗುತ್ತದೆ. ಗಿಡಗಳನ್ನು ನೆಟ್ಟು ಬೆಳೆಸಬೇಕು. ಮನೆಗಳಲ್ಲಿ ಬಳಕೆಯಾಗುವ ನೀರನ್ನು ಸಂರಕ್ಷಿಸಿ ಅಂತರ್ಜಲ ವೃದ್ಧಿಸಬೇಕು ಎಂದು ಜಿಸಿ ಹೇಳುತ್ತಾರೆ. ಕಾವೇರಿ ನದಿಯಲ್ಲಿ ಕಳೆದೆರಡು ವರ್ಷಗಳಿಂದ ಪ್ರವಾಹ ಏರ್ಪಡುತ್ತಿರುವುದಕ್ಕೆ ಮುಖ್ಯ ಕಾರಣ, ನದಿ ದಂಡೆಯಲ್ಲಿ ವಿಭಿನ್ನವಾದ ತಳಿಗಳ ಮರಗಳನ್ನು ಬೆಳೆಸದೇ ಇರುವುದು ಮುಖ್ಯ ಕಾರಣ. ಪ್ರಕೃತಿ ಮತ್ತು ಮಾನವನ ನಡುವಿನ ಸಂಘರ್ಷಕ್ಕೆ ಪರಿಹಾರ ಪರಿಸರವನ್ನು ಸಂರಕ್ಷಿಸುವುದೇ ಮೊದಲ ಆದ್ಯತೆಯಾಗಬೇಕಿದೆ ಎನ್ನುತ್ತಾರೆ ಆದರ್ಶ್.

ಸರ್ಕಾರಗಳು ಸಾರ್ವಜನಿಕ ರಿಂದ ಸಂಗ್ರಹಿಸುವ ಕೋಟ್ಯಾಂತರ ರೂಗಳನ್ನು ಒಳಚರಂಡಿ ನಿರ್ಮಾಣಕ್ಕೆ ಬಳಸುತ್ತದೆ. ಆದರೆ ಆ ಯೋಜನೆ ಸಫಲವಾಗುವುದಕ್ಕಿಂತ ವಿಫಲವಾಗುವುದೇ ಜಾಸ್ತಿ. ಇದಕ್ಕಿಂತ ಮನೆಗಳನ್ನು ಕಟ್ಟಿಕೊಳ್ಳುವ ಪ್ರತಿಯೊಬ್ಬರು ಆ ಮನೆಯ ಆವರಣದಲ್ಲಿ ಪ್ರತ್ಯೇಕವಾದ ಇಂಗುಗುಂಡಿಗಳನ್ನು ನಿರ್ಮಿಸಿ ನೀರನ್ನು ಸಂರಕ್ಷಿಸುವ ಮತ್ತು ಗಿಡಮರಗಳನ್ನು ಕಡ್ಡಾಯವಾಗಿ ನೆಟ್ಟು ಬೆಳೆಸುವಂತಹ ನಿಯಮಾವಳಿಗಳ ಪಾಲನೆಗೆ ಹೆಚ್ಚು ಒತ್ತು ಕೊಡು ವಂತಾಗಬೇಕು ಎನ್ನುವ ಜಿಸಿ ಯವರು, ಈ ಮಣ್ಣಿನಲ್ಲಿ ವಾಸವಿರುವ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯನ್ನು ಅದೊಂದು ಮುಖ್ಯ ಹೊಣೆಗಾರಿಕೆಯಾಗಿ ಸ್ವೀಕರಿಸಬೇಕು. ಪ್ರಕೃತಿಗೆ ವಿರುದ್ಧವಾಗಿ ನಾವು ನಡೆದು ಕೊಂಡರೆ ನೈಸರ್ಗಿಕ ವಿಕೋಪಗಳನ್ನು ತಡೆಯಲು ಯಾರಿಗೂ ಮತ್ತು ಯಾವ ಸರ್ಕಾರಗಳಿಗೂ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ. ಗಿಡಮರಗಳನ್ನು ನೆಟ್ಟು ಬೆಳೆಸಿ ಔಷಧೀಯ ವನವಾಗಿ ಪರಿವರ್ತಿಸಿ ಸೊಂಪಾದ ಜೀವನ ನಡೆಸುತ್ತಿರುವ ಜಿಸಿ ಅವರ ಬಳಿ ಪರಿಸರ ಹಾಗೂ ಪ್ರಕೃತಿಯ ಉಳಿವಿನ ಸಲಹೆ ಅಥವಾ ಮಾರ್ಗ ದರ್ಶನ ಪಡೆಯಲು 80884 60903 ಇಲ್ಲಿ ಸಂಪರ್ಕಿಸಬಹುದು.

- ಕೆ.ಎಸ್. ಮೂರ್ತಿ