ನೆನಪಿನಾಳದಿಂದ... ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿ ಅವರ ಬದುಕನ್ನು ಹಸನು ಮಾಡಿದವರು ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ತರ್ಕಶಾಸ್ತ್ರದ ಉಪನ್ಯಾಸಕರಾದ ಡಾ. ಎಸ್. ಎಚ್. ಖಂಡೋಬ. ಕಳೆದ ವಾರವಷ್ಟೇ ಅನಾರೋಗ್ಯದ ಕಾರಣದಿಂದ ವಿಧಿಯ ಆಟಕ್ಕೆ ಬಲಿಯಾಗಿ ಇಹಲೋಕವನ್ನು ತ್ಯಜಿಸಿದ್ದು ಬಹಳ ದುಃಖದ ವಿಚಾರ. ಇವರು ಮೂಲತ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಒಂದು ಕುಗ್ರಾಮದಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸದ ಬಳಿಕ ಸ್ನಾತಕೋತ್ತರ ಮತ್ತು ಪಿ. ಎಚ್. ಡಿ. ಪದವಿ ಪಡೆದು ವೀರಾಜಪೇಟೆಯ ಜ್ಯೂನಿಯರ್ ಕಾಲೇಜಿನಲ್ಲಿ ತರ್ಕಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಬಡತನದ ಕುಟುಂಬದಿಂದ ಬಂದವರು. ಮತ್ತು ವಿದ್ಯಾರ್ಥಿ ಜೀವನದಿಂದಲೇ ಸತತ ಪರಿಶ್ರಮ ಪಟ್ಟವರು. ವೀರಾಜಪೇಟೆ ಕಾಲೇಜಿಗೆ 2003ರಲ್ಲಿ ನೇಮಕವಾಗಿ 17 ವರ್ಷಗಳ ಸೇವೆಯನ್ನು ಸಲ್ಲಿಸಿದರು. ಅವರು ಸೇವೆಯಲ್ಲಿದ್ದ ಸಂದರ್ಭದಲ್ಲಿ ವಿಶೇಷವಾಗಿ ದ್ವಿತೀಯ ಪಿ.ಯು. ಫಲಿತಾಂಶದಲ್ಲಿ ಶೇಕಡಾ 100ರಷ್ಟು ಫಲಿತಾಂಶ ನೀಡುತಿದ್ದ ಹೆಗ್ಗಳಿಕೆ ಇವರದ್ದು.
ವಿದ್ಯಾರ್ಥಿಗಳಿಗೆ ತಮ್ಮದೇ ಆದ ಸರಳ ವಿಧಾನದಿಂದ ಬೋಧನೆ ಮಾಡುತ್ತಾ ಮಾರ್ಗದರ್ಶಕರೂ, ಹಿತೈಷಿಗಳು ಆಗಿದ್ದರು. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಆದರ್ಶ ಮತ್ತು ಪ್ರೀತಿಯ ಗುರುಗಳು, ವಿದ್ಯಾರ್ಥಿಗಳ ಬೆನ್ನ ಹಿಂದೆ ಇದ್ದು ಪೆÇ್ರೀತ್ಸಾಹವನ್ನು ನೀಡುತಿದ್ದ ಉತ್ಸಾಹಿಯಾಗಿದ್ದರು. ವಾರ್ಷಿಕ ಪ್ರವಾಸವನ್ನು ಏರ್ಪಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದರು. ಸರಕಾರಿ ಕಾಲೇಜು ಅಂದ ಮೇಲೆ ಅಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದವರೇ ಆಗಿರುತ್ತಾರೆ, ಅಂತಹ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಕಟ್ಟಲು, ಪುಸ್ತಕ ಖರೀದಿಗೆ ಸಹಾಯಹಸ್ತ ನೀಡಿ ಸರ್ಕಾರದಿಂದ ಬರುವ ಸೌಲಭ್ಯ ಮತ್ತು ವಿದ್ಯಾರ್ಥಿ ವೇತನದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಪ್ಪದೆ ನೀಡುತಿದ್ದರು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋೀಜಿಸು ತಿದ್ದರು. ದ್ವಿತೀಯ ಪಿ.ಯು.ನಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಬಹುಮಾನವನ್ನೂ ನೀಡುತ್ತಿದ್ದರು. ವೀರಾಜಪೇಟೆಯ ಚಿಕ್ಕಪೇಟೆಯಲ್ಲಿ ನೆಲೆಸಿದ್ದ ಇವರು ಸಾರ್ವಜನಿಕರು ಮತ್ತು ಪೆÇೀಷಕರೊಂದಿಗೂ ಉತ್ತಮವಾದ ಒಡನಾಟ ಹೊಂದಿದ್ದರು.
ಹಲವಾರು ಸನ್ಮಾನ, ಪುರಸ್ಕಾರಗಳು ಇವರಿಗೆ ಭಾಜನವಾಗಿವೆ. ನನ್ನಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಮುನ್ನಡೆಯಲು ಮಾರ್ಗದರ್ಶಕರಾಗಿದ್ದರು. ಹಗಲು ರಾತ್ರಿ ಎನ್ನದೆ ಸಂಸ್ಥೆಯ ಉನ್ನತಿಗೆ ಶ್ರಮಿಸಿ, ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡಿದ್ದಾರೆ. ಸಹದ್ಯೋಗಿಗಳು, ಉತ್ತಮ ಸ್ನೇಹಿತರಾಗಿದ್ದರು. ಸದಾ ಸ್ನೇಹಪರ ಚಿಂತನಶೀಲ ಪರೋಪಕಾರಿ ವ್ಯಕ್ತಿ, ನೇರ-ನಡೆ-ನುಡಿ ಉಳ್ಳವರಾಗಿದ್ದರು. ಅವರ ಅಕಾಲಿಕ ಮರಣವು ಆಘಾತವನ್ನು ನೀಡಿದೆ. ಅವರಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಇದ್ದಾರೆ. ಎಲ್ಲರನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಾ ಅವರು ಕಣ್ಮರೆಯಾಗಿದ್ದಾರೆ. ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ. ದಯಾಮಯಿ ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
-ಬಿ. ಎಸ್. ಶಾಂತಿಭೂಷಣ್, ಉಪನ್ಯಾಸಕರು
ವೀರಾಜಪೇಟೆ.