ಗೋಣಿಕೊಪ್ಪಲು, ಮಾ. 14: ತನ್ನ ಗ್ರಾಮದ ಜನತೆಯೊಂದಿಗೆ ಬೆರೆಯುತ್ತ ಗ್ರಾಮದ ಅಭಿವೃದ್ಧಿಯತ್ತ ಹೆಚ್ಚಿನ ನಿಗಾವಹಿಸುವ ಮೂಲಕ ಗ್ರಾಮದಲ್ಲಿ ಸ್ನೇಹಜೀವಿಯಾಗಿರುವ ಜೀವನ ಸಾಗಿಸುತ್ತಿರುವ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ತನ್ನ ಸ್ವಪ್ರಯತ್ನದಿಂದ ಜನಪ್ರತಿನಿಧಿಗಳ ಸಹಕಾರ ಪಡೆದು ಪೋಲಾಗುತ್ತಿದ್ದ ನೀರನ್ನು ಸಂಗ್ರಹಿಸಿ ಬೇಸಿಗೆ ಸಮಯದಲ್ಲಿ ರೈತರಿಗೆ ಈ ನೀರನ್ನು ಬಳಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಮಾಜಮುಖಿ ಪ್ರಯತ್ನ ದಿಂದ ಬಾಳೆಲೆ ಹೋಬಳಿಯ ನೂರಾರು ಕಾಫಿ, ಭತ್ತ ಬೆಳೆಯುವ ರೈತರಿಗೆ ಇದೀಗ ಬಿರು ಬೇಸಿಗೆಯಲ್ಲಿಯೂ ಯತೇಚ್ಚವಾಗಿ ನೀರು ಲಭ್ಯವಾಗುತ್ತಿದ್ದು ಅನ್ನದಾತ ರೈತ ಎರಡನೇ ಬೆಳೆಯನ್ನು ಬೆಳೆಯುವ ಕಾರ್ಯದಲ್ಲಿ ತೊಡಗಿದ್ದಾನೆ. ನದಿಗೆ ತಡೆಗೋಡೆ ನಿರ್ಮಿಸಿ ನೀರನ್ನು ಶೇಖರಿಸುವ ಮೂಲಕ ಈ ಭಾಗದ ನೂರಾರು ರೈತರಿಗೆ ಮಾದರಿಯಾಗಿದ್ದಾರೆ.
ಮಳೆಗಾಲದಲ್ಲಿ ತಮ್ಮ ಗದ್ದೆಯ ಮುಂದೆ ಬಾರಿ ಪ್ರಯೋಜನವಿದೆ ಎಂಬ ಮಾಹಿತಿಯನ್ನು ತಜ್ಞರು ನೀಡಿದ್ದರು. ತಜ್ಞರ ಮಾಹಿತಿಯನ್ನು ಪಡೆದ ರಂಜನ್ ಚಂಗಪ್ಪ ತಡಮಾಡದೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಗಮನ ಸೆಳೆದು. ಈ ಬಗ್ಗೆ ವಿವರ ನೀಡಿ ಎಂಐಡಿಯಿಂದ ಅನುದಾನ ಬಿಡುಗಡೆ ಗೊಳಿಸಿಕೊಡುವಂತೆ ಮನವಿ ಮಾಡಿದರು.
ಶಾಸಕ ಕೆ.ಜಿ. ಬೋಪಯ್ಯ ಅವರ ಆದೇಶದನ್ವಯ ನದಿಗೆ ಚೆಕ್ ಡ್ಯಾಮ್ ನಿರ್ಮಿಸಲು ರೂ. 30 ಲಕ್ಷ ಅನುದಾನ ಮಂಜೂರಾಯಿತು. ಈ ಸಂದರ್ಭ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಪೂರೈಸಲು ತಾವೇ ಮುರ್ತುವರ್ಜಿವಹಿಸಿ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿಯನ್ನು ಮಾಡಿಸುವಲ್ಲಿ ಯಶಸ್ವಿಯಾದರು. ಈ ಚೆಕ್‍ಡ್ಯಾಮ್ ನಿರ್ಮಾಣದಿಂದ ಡ್ಯಾಮ್‍ನ 5 ಕಿ.ಮೀ. ದೂರದ ಎರಡು ಭಾಗದ ಗ್ರಾಮಸ್ಥರಿಗೆ ಇದೀಗ ಮೇ ತಿಂಗಳವರೆಗೂ ಬಳಸಬಹುದಾದ ನೀರು ಸಂಗ್ರಹಣೆಯಾಗಿದೆ. ಪ್ರಾಯೋಗಿಕವಾಗಿ ಈ ನೀರನ್ನು ಬಳಸಿಕೊಂಡು 20 ಏಕರೆಯ ಭತ್ತದ ಗದ್ದೆಗೆ ಕೃಷಿ ಮಾಡಿ ಎರಡನೆಯ ಬೆಳೆ ಬೆಳೆಯಲು ಈ ನೀರನ್ನು ಬಳಸಿಕೊಳ್ಳಲಾಗಿದೆ. ಈಗಾಗಲೇ ಭತ್ತದ ಕೃಷಿ ಬೆಳೆಯುತ್ತಿದ್ದು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಫಸಲು ಕೈ ಸೇರುವ ಸಾಧ್ಯತೆ ಹೆಚ್ಚಾಗಿದೆ. ನದಿಯಲ್ಲಿ ನೀರು ಹೆಚ್ಚಾಗಿ ಸಂಗ್ರಹಗೊಂಡಿದ್ದು ಕಾಫಿ ಬೆಳೆಗೆ ನೀರು ಹಾಯಿಸಲು ಉಪಯುಕ್ತ ವಾಗಿದೆ.
ಎಂಐಡಿಯ ನುರಿತ ಕಾರ್ಮಿಕರು, ಇಂಜಿನಿಯರುಗಳು ಈ ಕಾಮಗಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದು ನೀರು ಕೆಳಗಿನ ಭಾಗಕ್ಕೆ ಬೇಕಾದ ಸಂದರ್ಭದಲ್ಲಿ 10 ಗೇಟ್‍ಗಳ ಮೂಲಕ ನೀರನ್ನು ಬಿಡುವ ಸೌಲಭ್ಯ ಕಲ್ಪಿಸಿದ್ದಾರೆ.
ರೈತರಿಗೆ ಈ ಚೆಕ್ ಡ್ಯಾಮ್‍ನಿಂದ ಬಾರಿ ಅನುಕೂಲಕರವಾಗಿದ್ದು ಮುಂದಿನ ಸಾಲಿನಿಂದ ನೂರಾರು ರೈತರು ಭತ್ತವನ್ನು ಎರಡನೇ ಬೆಳೆಯಾಗಿ ಬೆಳೆಯುವ ಸಾಧ್ಯತೆ ಹೆಚ್ಚಾಗಿದೆ. ದೂರದೃಷ್ಟಿಯ ಅಲೋಚನೆಯಿಂದ ಅನಾವಶ್ಯಕವಾಗಿ ಪೋಲಾಗುತ್ತಿದ್ದ ನೀರನ್ನು ಬೇಸಿಗೆಯ ಸಂದರ್ಭದಲ್ಲಿ ಗ್ರಾಮದ ರೈತರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಜಾಗೃತಿ ವಹಿಸಿದ ಅರಮಣಮಾಡ ರಂಜನ್ ಚಂಗಪ್ಪನವರ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.