ಮಡಿಕೇರಿ, ಮಾ.13: ಕೊರೊನಾ ವೈರಸ್ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದ್ದು, ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಜೊತೆಗೆ ವಿದೇಶದಿಂದ ಬರುವವರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಅಗತ್ಯ ಮುಂಜಾಗೃತಾ ಕ್ರಮಕೈಗೊಳ್ಳುವ ಸಂಬಂಧ ನಗರದ ಜಿ.ಪಂ. ನೂತನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಮುಖ್ಯಸ್ಥರ ವಿವಿಧ ಸಂಸ್ಥೆಯ ಮುಖ್ಯಸ್ಥರ ಜೊತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊರ ರಾಷ್ಟ್ರಗಳಿಂದ ಬರುವವರು ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಕೋರಿದರು.
ಕೊರೊನಾ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯವಾಣಿ 100 ಕ್ಕೆ ಕರೆ ಮಾಡಬಹುದಾಗಿದೆ. ವಿದೇಶದಿಂದ ಬರುವವರು ಸ್ವಯಂ ದೃಢೀಕರಣ ಪತ್ರವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಮಾಸ್ಕ್ನ್ನು ಎಲ್ಲರೂ ಧರಿಸುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಸಿಬ್ಬಂದಿಗಳು, ಆಸ್ಪತ್ರೆಗಳಲ್ಲಿ ಇರುವವರು ಮಾಸ್ಕ್ ಬಳಸಬಹುದಾಗಿದೆ ಎಂದು ಅವರು ತಿಳಿಸಿದರು.
ಕೊರೊನಾ ಸಂಬಂದಿಸಿದಂತೆ ತಾಲ್ಲೂಕು ಮಟ್ಟದಲ್ಲಿಯೂ ಸಹ ಮಾಹಿತಿ ನೀಡುವಂತೆ ತಹಶೀಲ್ದಾರ್, ಇಒಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸ್ವಚ್ಛತೆ ಕಡೆ ಗಮನಹರಿಸುವಂತಾಗಬೇಕು ಎಂದು ಅವರು ನಿರ್ದೇಶನ ನೀಡಿದರು.
ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಸುಳ್ಳು ವರದಿ ಹಬ್ಬಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಯಾವುದೇ ರೀತಿ ಆತಂಕ ಪಡುವಂತಿಲ್ಲ. ಈಗಾಗಲೇ ಜಿಲ್ಲಾಡಳಿತ ವತಿಯಿಂದ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಜೊತೆಗೆ ಹೊಟೇಲ್, ಹೋಂ ಸ್ಟೇ ಮತ್ತು ರೆಸಾರ್ಟ್ಗಳಲ್ಲಿ ಕೊರೊನಾ ವೈರಸ್ ಕುರಿತಾಗಿ ಕರಪತ್ರಗಳನ್ನು ನೀಡುವ ಕಾರ್ಯವನ್ನು ಮಾಡಬೇಕು. ಪ್ರವಾಸಕ್ಕಾಗಿ ಬರುವವರ ವಿವರಗಳನ್ನು ಸಮರ್ಪಕವಾಗಿ ಸಂಗ್ರಹಿಸಬೇಕು. ವಿದೇಶ ಪ್ರವಾಸದ ಹಿನ್ನೆಲೆ ತಿಳಿದು ಬಂದರೆ ತಕ್ಷಣವೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಹೊಟೇಲ್, ಹೋಂಸ್ಟೇ ಅಸೋಸಿಯೇಷನ್ಗಳ ಮುಖ್ಯಸ್ಥರಿಗೆ ಮನವಿ ಮಾಡಿದರು. ಈ ದಿಸೆಯಲ್ಲಿ ಕೊಡಗಿನ ಜನತೆ ಸ್ವಯಂ ಜಾಗೃತರಾಗುವಂತೆಯೂ ಕರೆ ನೀಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ತಮ್ಮ ಕಚೇರಿಯಲ್ಲಿನ ಸಿಬ್ಬಂದಿಗಳ ಬಗ್ಗೆ ಕಾಳಜಿವಹಿಸಬೇಕು. ಕೊರೊನಾ ವೈರಸ್ ಸಂಬಂಧಿತ ರೋಗ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.
ಈಗಾಗಲೇ 104 ಸಹಾಯವಾಣಿ ಇದ್ದು, ಜಿಲ್ಲೆಯಲ್ಲಿ ಈ ಬಗ್ಗೆ ಯಾವುದೇ ಪ್ರಕರಣದ ಮಾಹಿತಿ ಇದ್ದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಮೊಬೈಲ್ ಸಂಖ್ಯೆ: 944984326ಗೆ ಕರೆ ಮಾಡುವಂತೆ ಸಲಹೆ ನೀಡಿದರು. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅವಶ್ಯಕತೆಯಿದ್ದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ಕ್ಕೆ ಕರೆ ಮಾಡುವಂತೆ ಜನತೆಗೆ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆಣ್ಣೇಕರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಪೌರಾಯುಕ್ತÀ ಎಂ.ಎಲ್.ರಮೇಶ್, ನಾನಾ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವಿದೇಶದಿಂದ ಬರುವವರ ಮಾಹಿತಿ
ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣ ಇದುವರೆಗೆ ವರದಿಯಾಗಿಲ್ಲ. ಆದರೂ ಒಬ್ಬರು ಕೊಡಗು ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿಶೇಷ ವಾರ್ಡ್ನಲ್ಲಿ ದಾಖಲಾಗಿದ್ದು, ಕೊರೊನಾ ಸಂಬಂಧಿಸಿದಂತೆ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ದುಬೈನಿಂದ ಮರಳಿದ ವ್ಯಕ್ತಿಯೋರ್ವರಿಗೆ ಗಂಟಲು ನೋವು ಕಾಡಿದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಸ್ವಯಂ ದಾಖಲಾಗಿ ಪರೀಕ್ಷೆ ಕೈಗೊಂಡಿದ್ದಾರೆ. ಅವರ ರಕ್ತದ ಮಾದರಿಯನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಯನ್ನು ನಿರೀಕ್ಷಿಸಲಾಗಿದೆ ಎಂದರು.
ಕೇರಳ ಗಡಿಭಾಗವಾಗಿರುವ ಕೊಡಗಿನಲ್ಲಿ ಕೊರೊನಾ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ವಿದೇಶದಿಂದ ಮರಳುವ ಪ್ರವಾಸಿಗರ ಮೇಲಷ್ಟೇ ಇದೀಗ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೊಡಗಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸುವ ಯಾವುದೇ ತೀರ್ಮಾನ ಜಿಲ್ಲಾಡಳಿತ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಬಗ್ಗೆ ಯಾವುದೇ ರೀತಿಯ ಭಯ, ಆತಂಕ ಅನಗತ್ಯ, ಆದರೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಈ ಸಂಬಂಧ ಜೊತೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮೊಬೈಲ್ ಸಂಖ್ಯೆ: 9449843263, ಮಡಿಕೇರಿ ತಾಲೂಕು ಆರೋಗ್ಯಧಿಕಾರಿಗಳ ಮೊಬೈಲ್ ಸಂಖ್ಯೆ 9449843203, ವೀರಾಜಪೇಟೆ 9448448481 ಮತ್ತು ಸೋಮವಾರಪೇಟೆ 9880996893 ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಕೊರೊನಾ ಸೋಂಕು ಸಂಬಂಧಿಸಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣರಾಗುತ್ತಿದ್ದಾರೆ. ಇಂಥ ಸುಳ್ಳು ಸಂದೇಶಗಳ ಮೇಲೂ ಜಿಲ್ಲಾಡಳಿತ ನಿಗಾ ವಹಿಸಲಿದೆ. ಯಾವುದೇ ಅಧಿಕೃತ ಮಾಹಿತಿಯಿದ್ದರೂ ಜಿಲ್ಲಾಡಳಿತದಿಂದಲೇ ಲಭ್ಯವಾಗಲಿದೆ ಎಂದು ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾಹಿತಿ ನೀಡಿ, ಕೆಮ್ಮು, ಶೀತ ಭಾಧಿತರಷ್ಟೇ ಮಾಸ್ಕ್ ಧರಿಸಬೇಕೇ ವಿನಾ ಅನಗತ್ಯವಾಗಿ ಮಾಸ್ಕ್ ಧರಿಸಬೇಕಾಗಿಲ್ಲ ಎಂದರು.
ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ತಮ್ಮಯ್ಯ ಮಾತನಾಡಿ, ಹಕ್ಕಿಜ್ವರ ಪ್ರಕರಣಗಳೂ ರಾಜ್ಯದ ಕೆಲವೆಡೆ ವರದಿಯಾಗುತ್ತಿದ್ದು ಈ ನಿಟ್ಟಿನಲ್ಲಿಯೂ ಕೊಡಗಿನಲ್ಲಿ ಮುಂಜಾಗ್ರತೆ ವಹಿಸಲಾಗಿದೆ ಎಂದರು. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್ ಹಾಜರಿದ್ದರು.