ಗೋಣಿಕೊಪ್ಪಲು, ಮಾ. 13: ನೆರೆಯ ಕೇರಳ ರಾಜ್ಯದ ಮೂಲಕ ಕೊಡಗು ಜಿಲ್ಲೆಗೆ ಕಸ ತಂದು ಸುರಿಯುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವೀರಾಜಪೇಟೆ ತಾಲೂಕು ಪಂಚಾಯಿತಿ ಕೆ.ಡಿ.ಪಿ. ಸಭೆಯಲ್ಲಿ ಒತ್ತಾಯ ಕೇಳಿಬಂದಿತು.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಉಪಾಧ್ಯಕ್ಷ ನೆಲ್ಲಿರ ಪ್ರಕಾಶ್ ಅವರು, ನೆರೆಯ ಕೇರಳ ರಾಜ್ಯದಿಂದ ಮಾಕುಟ್ಟ, ಕುಟ್ಟ ಮೂಲಕ ಕಸಗಳನ್ನು ತಂದು ಸುರಿಯುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿ ಆಧಾರದಲ್ಲಿ ಪ್ರಶ್ನಿಸಿದರು. ಪೊಲೀಸರು ತಪಾಸಣೆ ವೇಳೆ ಹಣ ಪಡೆದುಕೊಂಡು ವಾಹನಗಳನ್ನು ಜಿಲ್ಲೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಸಭೆಗೆ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಬಯಸಲಾಯಿತು. ಮಾಕುಟ್ಟ ತಪಾಸಣಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕ್ರಮ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ಸರ್ಕಾರಿ ಯೋಜನೆ ಅನುಷ್ಠಾನ ದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಸಿಡಿಪಿಒ ಸೀತಾಲಕ್ಷ್ಮಿ ವಿರುದ್ಧ ಕ್ರಮಕೈಗೊಳ್ಳಲು ಸಭೆಯಲ್ಲಿ ಒತ್ತಾಯಿಸಲಾಯಿತು.

ಈ ಬಗ್ಗೆ ಪ್ರಸ್ತಾಪಿಸಿದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ನೆಲ್ಲಿರ ಚಲನ್‍ಕುಮಾರ್, ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನಿರ್ಲಕ್ಷ್ಯದಿಂದ ಸಾಕಷ್ಟು ಯೋಜನೆಗಳು ರದ್ದಾಗಿರುವುದು ಅಭಿವೃಧ್ಧಿ ದೃಷ್ಟಿಯಿಂದ ತಾಲೂಕಿಗೆ ನಷ್ಟವಾಗಿದೆ. ಈ ವರ್ಷ ಕೂಡ ಇದು ಮುಂದುವರಿಯಬಾರದು ಎಂದರು. ಸಭೆಗೆ ಗೈರಾಗಿರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರು. ಅವರ ಬಗ್ಗೆ ಸಾಕಷ್ಟು ಆರೋಪಗಳಿವೆ. ಸಭೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಉಪಾಧ್ಯಕ್ಷ ಚಲನ್ ಹೇಳಿದರು. ಕಳೆದ ವರ್ಷ ಅವರ ನಿರ್ಲಕ್ಷ್ಯದಿಂದ ರದ್ದಾಗಿರುವ ಯೋಜನೆಗಳು ಸಾಕಷ್ಟಿವೆ. ಇದು ಈ ವರ್ಷ ಮುಂದುವರಿಯದಂತೆ ಅವರು ಯಾವ ರೀತಿ ಕ್ರಮಕೈಗೊಂಡಿದ್ದಾರೆ ಎಂಬ ಮಾಹಿತಿ ಇಲ್ಲ. ಬೇಜವಬ್ದಾರಿಯಿಂದ ಸಭೆಗೆ ಕಂಪ್ಯೂಟರ್ ಆಪರೇಟರ್‍ನ್ನು ಕಳುಹಿಸಿರುವ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಿಂದ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಯನ್ನು ಹೊರ ಕಳುಹಿಸಲಾಯಿತು. ಸಾಕಷ್ಟು ಬಾರಿ ಕಚೇರಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸಲು ಬರುವಂತೆ ಸೂಚಿಸಿದ್ದರೂ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಇಒ ಷಣ್ಮುಗಂ ಹೇಳಿದರು. ಮಾರ್ಚ್ ಕೊನೆಯವರೆಗೆ ಪೂರ್ಣ ಗೊಳ್ಳಬೇಕಾದ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಯೋಜನೆ ರದ್ದಾಗದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಕೊರೊನಾ ವೈರಸ್ ಮುಂಜಾಗೃತೆ ಬಗ್ಗೆ ಜಾಗೃತಿ ನಿತ್ಯ ನಡೆಸಬೇಕು. ಪ್ರತಿ ಪಟ್ಟಣದಲ್ಲಿ ಜಾಗೃತಿ ಕಾರ್ಯಕ್ರಮ ಗಳನ್ನು ಹೆಚ್ಚು ಆಯೋಜಿಸಬೇಕು ಎಂದು ಸೂಚಿಸಲಾಯಿತು.

ಕಳೆದ ವರ್ಷದ ಪ್ರಕೃತಿ ವಿಕೋಪಕ್ಕೆ ಕಾಫಿ ತೋಟಗಳ ಮಣ್ಣು ಕೊಚ್ಚಿ ಹೋಗಿರುವುದರಿಂದ ನಿಯಂತ್ರಣಕ್ಕೆ ಕೃಷಿ ಸುಣ್ಣ ವಿತರಣೆಗೆ ಕೃಷಿ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಚಲನ್‍ಕುಮಾರ್ ಒತ್ತಾಯಿಸಿದರು.

ಸೆಸ್ಕ್ ಎಇಇ ಅಂಕಯ್ಯ ಮಾತನಾಡಿ, ಈಗಾಗಲೇ ಸೌಭಾಗ್ಯ ಸ್ಕೀಂನಲ್ಲಿ 647 ಫಲಾನುಭವಿಗಳಿಗೆ ವಿದ್ಯುತ್ ಸೌಕರ್ಯ ನೀಡಲಾಗಿದೆ. 11 ಕುಡಿಯುವ ನೀರು ಯೋಜನೆಗೆ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಮುಂದಿನ ಕಾರ್ಯ ಯೋಜನೆ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ತಾಲೂಕು ಸರ್ವೇ ಇಲಾಖೆಗೆ ನೂತನವಾಗಿ ಖಾಯಂ ಎಡಿಎಲ್‍ಆರ್ ಆಗಿ ನೇಮಕ ವಾಗಿರುವ ಮಹೇಶ್ ಅವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸರ್ಕಾರಿ ಶಾಲೆಯ ಜಾಗವನ್ನು ದಾಖಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಭೆ ಸೂಚಿಸಿತು. ಹೈಸೊಡ್ಲೂರು ಗ್ರಾಮದಲ್ಲಿ ತಾಲೂಕು ಇಒ ಹೆಸರಿನಲ್ಲಿರುವ ಸರ್ಕಾರಿ ಜಾಗದ ದಾಖಲಾತಿಯನ್ನು ದುರಸ್ತಿ ಪಡಿಸಿ ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು.

ದುಬಾರೆ ಹೊಳೆಯಲ್ಲಿ ನೀರಿನಲ್ಲಿ ಮುಳುಗಿ ಸಾವಿಗೀಡಾದ ಲಯನ್ಸ್ ಶಾಲೆಯ ವಿದ್ಯಾರ್ಥಿಗಳ ಸಾವಿಗೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಿದೆ ಎಂದು ಚಲನ್ ಒತ್ತಾಯಿಸಿದರು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ಶಾಲೆಯ ನಿರ್ವಹಣಾ ಸಮಿತಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಖಾಸಗಿ ಶಾಲೆಯಾಗಿರುವುದರಿಂದ ನೇಮಕ ಮತ್ತು ಶಿಸ್ತು ಕ್ರಮಗಳ ಬಗ್ಗೆ ಸಮಿತಿಗೆ ಹಕ್ಕಿರುವುದರಿಂದ ಈ ಬಗ್ಗೆ ಸೂಚಿಸಲಾಗಿದೆ. ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.