ಮಡಿಕೇರಿ, ಮಾ. 12: ರಕ್ತದಾನ ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಯಾಗಿ ಲವಲವಿಕೆ, ಉತ್ಸಾಹ ಇಮ್ಮಡಿಸುವುದಲ್ಲದೆ, ಇನ್ನೊಂದೆಡೆ ನಾವು ನೀಡಿದ ರಕ್ತವು ಮೂರು ಜೀವಗಳನ್ನು ಉಳಿಸಲು ನೆರವಾಗುತ್ತದೆ ಎಂದು, ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು. ಮಡಿಕೇರಿಯ ಬಾಲಭವನದಲ್ಲಿ ನಡೆದ, ಸುಂಟಿಕೊಪ್ಪ ಜೇಸಿಐ ಮತ್ತು ವಿಕಾಸ್ ಜನಸೇವಾ ಕೇಂದ್ರದ ಸಹಯೋಗದಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಘಟನೆಯ ಪ್ರಥಮ ವಾರ್ಷಿಕೋತ್ಸವ ಮತ್ತುರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅನೂಪ್, 16 ರಿಂದ 60ರ ವಯೋಮಾನದ ಎಲ್ಲರೂ ರಕ್ತದಾನ ಮಾಡಬಹುದು ಎಂದರು. ರಕ್ತದ ಕೊರತೆಯಿಂದ ದೇಶದಲ್ಲಿ ಪ್ರತಿ 2 ಸೆಕೆಂಡಿಗೊಮ್ಮೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಘಟನೆ ಮಿಡಿಯುತ್ತಿರುವುದು ಶ್ಲಾಘನೀಯ ಎಂದ ಅವರು, ಸಂಘಟನೆಯನ್ನು ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಉಸ್ತುವಾರಿ ಕರುಂಬಯ್ಯ ಮಾತನಾಡಿ, ರಕ್ತದಾನಿಗಳಿಂದಾಗಿ ಜಿಲ್ಲಾಸ್ಪತ್ರೆಗೆ ಬರುವ ಅನೇಕ ರೋಗಿಗಳಿಗೆ ನೆರವಾಗಿದ್ದು, ತಕ್ಷಣಕ್ಕೆ ರಕ್ತ ಸಿಗುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಘಟನೆಯ ಕಾರ್ಯನಿರ್ವಾಹಕ ಇಮ್ರಾನ್ ಅಡ್ಡೂರು, ಜನವಿಕಾಸ ಸೇವಾ ಕೇಂದ್ರದ ರಮೇಶ್ ಮತ್ತು ಮೂಡಾ ಮಾಜಿ ಅಧ್ಯಕ್ಷ ಎ.ಸಿ. ದೇವಯ್ಯ ಆಶಯ ಮಾತನಾಡಿದರು.
ಇದೇ ವೇಳೆ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಇರ್ಫಾಝ್ ಬನ್ನೂರು, 4 ಬಾರಿ ರಕ್ತದಾನ ಮಾಡಿದ ಮಡಿಕೇರಿಯ ಮಂದಣ್ಣ, 24 ಬಾರಿ ರಕ್ತದಾನ ಮಾಡಿದ ಖಲೀಲ್ ಪಾಷಾ, 5 ವರ್ಷಗಳಿಂದ ರಕ್ತದಾನ ಮಾಡುತ್ತಿರುವ ಪಿಎಫ್‍ಐ ಬ್ಲಡ್ ಡೋನರ್ಸ್ ಫೋರಂ ಸದಸ್ಯ ಉನೇಜ್, ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿರುವ ಮನ್ಸೂರ್ ಮತ್ತು ರಕ್ತನಿಧಿ ಕೇಂದ್ರದ ಕರುಂಬಯ್ಯ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಬಾಲಭವನ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ಈ ವೇಳೆ ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ವಿನು, ಮಡಿಕೇರಿ ಹಿತರಕ್ಷಣಾ ಸಮಿತಿಯ ರವಿ ಗೌಡ, ರಕ್ಷಣಾ ವೇದಿಕೆಯ ಪವನ್ ಪೆಮ್ಮಯ್ಯ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ. ರವಿ, ಕರವೇ ವೀರಾಜಪೇಟೆ ಅಧ್ಯಕ್ಷ ಟಿ.ವಿ. ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.
30ಕ್ಕೂ ಅಧಿಕ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ನೀಡಿದರು.