*ಸಿದ್ದಾಪುರ, ಮಾ. 12 : ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರಮೋದಿ ಅವರ ಹೆಸರಿನ ಸಭಾ ಭವನವನ್ನು ನಿರ್ಮಿಸಿ ಸಂಘದ ಸದಸ್ಯರಿಗೆ ಹಾಗೂ ಜನಸಾಮಾನ್ಯರಿಗೆ ಸಮಾರಂಭಗಳನ್ನು ನಡೆಸಲು ಸಹಕಾರಿಯಾಗಿದ್ದ ಸಂಘ ಇದೀಗ ಅತಿಥಿ ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.

ಸಹಕಾರಿ ಕ್ಷೇತ್ರದಲ್ಲಿ ಕೊಡಗಿನ ಸಹಕಾರ ಸಂಘಗಳು ದೇಶಕ್ಕೇ ಮಾದರಿ ಎನ್ನುವ ಮಾತಿದೆ. ರೈತಾಪಿ ವರ್ಗಕ್ಕೆ ಸಹಕಾರಿಯಾಗಿರುವ ಇಲ್ಲಿನ ಸಂಘಗಳ ಕಾರ್ಯ ಚಟುವಟಿಕೆ ಕೇವಲ ಸಾಲ ನೀಡುವುದು ಮತ್ತು ವಸೂಲಾತಿಗಷ್ಟೇ ಸೀಮಿತವಾಗದೆ ಸಂಘದ ಪ್ರಗತಿಗೂ ಪರ್ಯಾಯ ಯೋಜನೆಗಳನ್ನು ರೂಪಿಸಿ ಯಶಸ್ವಿಯಾದ ಉದಾಹರಣೆಗಳಿವೆ.

ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ದಾನಿಗಳ ಸಹಕಾರದಿಂದಲೇ ಸಾಲವಿಲ್ಲದೆ ನರೇಂದ್ರಮೋದಿ ಭವನ ನಿರ್ಮಿಸಿ ಇದೀಗ ಸಾಕಷ್ಟು ಆದಾಯ ಗಳಿಸುತ್ತಿದೆ. ಮತ್ತೊಂದು ಯೋಜನೆಗೆ ಮುಂದಾಗಿರುವ ಸಂಘ ಅತಿಥಿ ಗೃಹ ಮತ್ತು ಮೂರು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದು, ಶೇ.60 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಯೋಜನೆಗಾಗಿ ಸುಮಾರು ರೂ. 35 ಲಕ್ಷ ಖರ್ಚು ಮಾಡಲಾಗುತ್ತಿದೆ. ಸಧ್ಯದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅತಿಥಿ ಗೃಹ ಮತ್ತು ಅಂಗಡಿ ಮಳಿಗೆಗಳು ಜನರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ಸಂಘದ ಆಡಳಿತ ಮಂಡಳಿ ತಿಳಿಸಿದೆ.

ಕಾಮಗಾರಿಗೆ ಅಡೆತಡೆ : ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಮುಂದಾದರು ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಿವೆ. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರ ನೇತೃತ್ವದ ಆಡಳಿತ ಮಂಡಳಿ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದು, ಇದೀಗ ಅತಿಥಿಗೃಹ ನಿರ್ಮಾಣಕ್ಕೂ ವಿಘ್ನ ಎದುರಾಗಿದೆ. ಆದರೆ ಆಡಳಿತ ಮಂಡಳಿ ಮಾತ್ರ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಕಾಮಗಾರಿಯನ್ನು ಮುಂದುವರಿಸಿದೆ.

ಏನಿದು ತಡೆ ? : ಸುಮಾರು 25 ವರ್ಷಗಳ ಹಿಂದೆ ಈ ಸಂಘಕ್ಕಾಗಿ ಅಂದು ಸಂಘದ ಅಧ್ಯಕ್ಷರಾಗಿದ್ದ ಮುಳ್ಳಂಡ ಸನ್ನಿ ಅಯ್ಯಪ್ಪ ಅವರು ಸ್ವಂತ ಕಟ್ಟಡಕ್ಕಾಗಿ ತಮಗೆ ಸೇರಿದ 10 ಸೆಂಟ್ ಜಾಗವನ್ನು ರೂ. 80 ಸಾವಿರಕ್ಕೆ ಸಂಘಕ್ಕೆ ಮಾರಾಟ ಮಾಡಿದ್ದರು. ನಂತರದ ದಿನಗಳಲ್ಲಿ ಆರು ಸೆಂಟ್ ಜಾಗದಲ್ಲಿ ಸಹಕಾರ ಸಂಘದ ಕಟ್ಟಡ ನಿರ್ಮಾಣವಾಯಿತು. 10 ಸೆಂಟ್ ಜಾಗಕ್ಕಾಗಿ 80 ಸಾವಿರ ರೂ.ಗಳನ್ನು ಪಾವತಿಸಿದ್ದರೂ ಆರು ಸೆಂಟ್ ಜಾಗವನ್ನು ಮಾತ್ರ ನೀಡಿ ನಾಲ್ಕು ಸೆಂಟ್ ಜಾಗವನ್ನು ತಮ್ಮ ಅಧೀನದಲ್ಲೇ ಇರಿಸಿಕೊಂಡಿರುವ ಬಗ್ಗೆ ಅಧ್ಯಕ್ಷ ಮಣಿಉತ್ತಪ್ಪ ಹಾಗೂ ಸನ್ನಿ ಅಯ್ಯಪ್ಪ ಅವರ ನಡುವೆ ಸಮರ ನಡೆಯುತ್ತಲೇ ಇದೆ.

ಇದೀಗ ಅತಿಥಿಗೃಹ ಹಾಗೂ ಅಂಗಡಿ ಮಳಿಗೆ ನಿರ್ಮಾಣಗೊಳ್ಳುತ್ತಿದ್ದಂತೆ ಸನ್ನಿ ಅಯ್ಯಪ್ಪ ಅವರ ಪುತ್ರ ಆಕ್ಷೇಪ ವ್ಯಕ್ತಪಡಿಸಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ನನ್ನ ಅಜ್ಜನ ಪಾಲಿನ ಆಸ್ತಿ ನನಗೆ ಬರಬೇಕಾಗಿದ್ದು, ಸಹಕಾರ ಸಂಘಕ್ಕೆ ನೀಡಲು ಸಾಧ್ಯವಿಲ್ಲವೆಂದು ಪುತ್ರ ವಾದಿಸಿದ್ದಾರೆ. ಸಂಘದ ಆಡಳಿತ ಮಂಡಳಿ ಈ ಬಗ್ಗೆ ಬ್ಯಾನರ್ ಅಳವಡಿಸಿ ಸಹಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರ ಕೋರಿ ಕಾಮಗಾರಿಯನ್ನು ಚುರುಕುಗೊಳಿಸಿದೆ.

ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತಗೊಳ್ಳುವುದಿಲ್ಲ, ಜನಪರವಾದ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವೇ ಇಲ್ಲವೆಂದು ಮಣಿಉತ್ತಪ್ಪ ಸ್ಪಷ್ಟಪಡಿಸಿದ್ದಾರೆ. ಇದೀಗ ಕಾಮಗಾರಿ ಮುಂದುವರೆದಿದ್ದು, ಸಹಕಾರಿಗಳು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.