ಮಡಿಕೇರಿ, ಮಾ. 12: ಭಾರತ ಗಡಿ ಭಾಗದ ದಕ್ಷಿಣ ಕಾಶ್ಮೀರದಲ್ಲಿ ಮೂರು ದಿನಗಳ ಹಿಂದೆ (ತಾ.9) ಪಾಕಿಸ್ತಾನದಿಂದ ದೇಶದೊಳಗೆ ನುಸುಳಿದ್ದ ಉಗ್ರರಿಬ್ಬರನ್ನು ಭಾರತೀಯ ಸೇನೆಯ ಭಯೋತ್ಪಾದನೆ ನಿಗ್ರಹ ದಳದ ಗಡಿ ಸುರಕ್ಷಾ ಯೋಧರು ಸದೆಬಡಿದಿದ್ದು, ಈ ತಂಡದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕೊಡಗಿನ ಯೋಧರೊಬ್ಬರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತಗೊಳ್ಳುತ್ತಿದೆ.ತಾ. 9ರಂದು ಬೆಳಗಿನ ಜಾವ ದಕ್ಷಿಣ ಕಾಶ್ಮೀರದ ಖಾವಜ್ಪುರದ ಸೋಫಿಯಾನ್ ಡಿಸ್ಟೆನ್ಸ್ ಎಂಬಲ್ಲಿ ಬೆಳ್ಳಂಬೆಳಿಗ್ಗೆ ಇಬ್ಬರು ಪಾಕಿಸ್ತಾನದ ಕರಾಚಿ ಮೂಲದ ಉಗ್ರರು ಶಸ್ತ್ರ ಸಜ್ಜಿತರಾಗಿ ದೇಶದೊಳಗೆ ನುಸುಳಿದ್ದಾರೆ. ಈ ಸಂದರ್ಭ ಕರ್ತವ್ಯದಲ್ಲಿದ್ದ ಭಾರತೀಯ ಸೇನೆಯ ಭಯೋತ್ಪಾದಕ ನಿಗ್ರಹದಳದ ಸೈನಿಕರು ಮುಂದೆ ಸಂಭವಿಸಲಿದ್ದ ಭಾರೀ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿ ಗೊಂಡು, ನುಸುಳು ಕೋರರನ್ನು ಹತ್ಯೆಗೈದಿದ್ದಾರೆ. ಕಾರ್ಯಾ ಚರಣೆಯಲ್ಲಿ ಕೊಡಗು ಮೂಲದ ನಲ್ವತ್ತೋಕ್ಲು ಗ್ರಾಮದ ಚಿಲ್ಲವಂಡ ಸೋಮಣ್ಣ ಎಂಬ ಯೋಧ ಪ್ರಮುಖ ಪಾತ್ರ ವಹಿಸಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಯ ಸಂದೇಶ ಹರಿದಾಡುತ್ತಿದೆ.ಈ ಯೋಧ ನಲ್ವತ್ತೋಕ್ಲು ಚೋಕಂಡಳ್ಳಿಯ ನಿವಾಸಿಗಳಾದ ಚಿಲ್ಲವಂಡ ಚಂಗಪ್ಪ ಹಾಗೂ ಬೋಜಮ್ಮ ದಂಪತಿಯ ಪುತ್ರನಾಗಿದ್ದು, ಜಿಲ್ಲೆಯ ಹೆಮ್ಮೆಯ ಪುತ್ರ ಎಂದು ಎಲ್ಲೆಡೆಯಿಂದ ಶ್ಲಾಘನೆಯ ಸಂದೇಶ ಹರಿದಾಡುತ್ತಿದೆ. ಹತ್ಯೆಗೀಡಾದ ಉಗ್ರರಲ್ಲಿ ಅಮೀರ್ ಹಾಗೂ ಮಹಮ್ಮದ್ ಎಂದು ಉಲ್ಲೇಖವಿದೆ.