ಕೂಡಿಗೆ, ಮಾ. 12: ಕೂಡಿಗೆ ಗ್ರಾಮ ಪಂಚಾಯಿ ಜಮಾಬಂದಿ ಕಾರ್ಯಕ್ರಮವು ಎರಡು ವರ್ಷಗಳು ಕಳೆದರೂ ಇದುವರೆಗೆ ಈ ಕಾರ್ಯಕ್ರಮದ ಸಭೆ ಸಾರ್ವಜನಿಕವಾಗಿ ನಡೆದಿಲ್ಲ ಎಂಬುದು ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಗ್ರಾಮಸ್ಥರ ಆರೋಪವಾಗಿದೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಕ್ರಿಯಾಯೋಜನೆಗೆ ಅನುಗುಣವಾದ ಕಾಮಗಾರಿಗಳ ಖರ್ಚು ವೆಚ್ಚಗಳ ಬಗ್ಗೆ ಸರ್ಮಪಕವಾದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವ ನಿಯಮ ಇದ್ದರೂ ಸಹ ಕೂಡಿಗೆ ಗ್ರಾಮ ಪಂಚಾಯಿತಿ ಮಾಹಿತಿ ನೀಡುತ್ತಿಲ್ಲ.
2018-19 ಮತ್ತು 2019 -20 ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ನಡೆದಿರುವುದಿಲ್ಲ. ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ವರ್ಷಕ್ಕೆ ಎರಡು ಬಾರಿ ಅಭಿವೃದ್ಧಿ ಅಧಿಕಾರಿಗಳ ಬದಲಾವಣೆಯಿಂದಾಗಿ ಅಧಿಕಾರಿಗಳು ಜಮಾಬಂದಿ ಕಾರ್ಯಕ್ರಮ ನಡೆಸಲು ಮುಂದಾಗುತ್ತಿಲ್ಲ ಎಂಬುದು ಕೇಳಿಬರುತ್ತಿದೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ವರ್ಗದವರು, ಜಮಾಬಂದಿ ಕಾರ್ಯಕ್ರಮದ ಸಭೆಯನ್ನು ಕರೆದು ಲೆಕ್ಕಪತ್ರ ಮಂಡನೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.