ಮಡಿಕೇರಿ, ಮಾ. 12: ಕುಯ್ಯಂಗೇರಿ ನಾಡಿಗೆ ಒಳಪಟ್ಟಿರುವ ಹೊದವಾಡ ಗ್ರಾಮದ ಪುರಾತನ ಶ್ರೀ ಅಮ್ಮೇರಪ್ಪ (ಭಗವತಿ ಅನ್ನ ಪೂರ್ಣೇಶ್ವರಿ) ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಈ ಸಂಬಂಧ ಕೇರಳದ ಕಾಳೇಘಾಟ್‍ನ ನಾರಾಯಣ ತಂತ್ರಿಗಳ ನೇತೃತ್ವದಲ್ಲಿ ದೇವತಾ ಕೈಂಕರ್ಯ ಕೈಗೊಳ್ಳ ಲಾಯಿತು. ಅನೇಕ ಶತಮಾನಗಳ ಹಿಂದೆ ಶ್ರೀ ಅನ್ನಪೂರ್ಣೇಶ್ವರಿ ದೇವಿಯನ್ನು ಓಲೈಸಿಕೊಂಡು ಹೊದವಾಡದ ಬೊಟ್ಟತಮ್ಮಂಡ ಕುಟುಂಬದ ಜಾಗದಲ್ಲಿ ಹಿರಿಯರು ಈ ಅಪರೂಪದ ದೇಗುಲವನ್ನು ನಿರ್ಮಿಸಿದ್ದಾಗಿ ಅಷ್ಟಮಂಗಲದಲ್ಲಿ ಗೋಚರಿಸಿದೆ.

ಕಾಲ ನಂತರದಲ್ಲಿ ಆ ಕುಟುಂಬ ಸ್ಥಾನಪಲ್ಲಟಗೊಂಡು ಚೌರೀರ ಕುಟುಂಬದ ಮುಂದಾಳತ್ವದಲ್ಲಿ ದೇವರ ಕೈಂಕರ್ಯಗಳನ್ನು ಸುಮಾರು 12 ಕುಟುಂಬಗಳ ಮುಖ್ಯಸ್ಥರು ಗ್ರಾಮಸ್ಥರ ಜತೆಗೂಡಿ ನಡೆಸಿಕೊಂಡು ಬಂದಿರುವದಾಗಿದೆ. ಮುಖ್ಯವಾಗಿ ದೇವಿಯ ಆರಾಧನೆಯೊಂದಿಗೆ ಪರಿವಾರ ದೇವರುಗಳಾಗಿ ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಅಯ್ಯಪ್ಪ ಹಾಗೂ ನಾಗದೇವತೆಯ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.