ಮಡಿಕೇರಿ, ಮಾ. 12: ಜಿಲ್ಲೆಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಮೇ 24 ರಂದು ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಡಿ ವರನಿಗೆ ಪ್ರೋತ್ಸಾಹ ಧನ (ಹೂವಿನ ಹಾರ, ಪಂಚೆ, ಶರ್ಟ್, ಶಲ್ಯಕ್ಕಾಗಿ) ರೂ 5 ಸಾವಿರ, ವಧುವಿಗೆ ಪ್ರೋತ್ಸಾಹಧನ (ಹೂವಿನ ಹಾರ, ದಾರೆ ಸೀರೆ, ಮತ್ತು ರವಿಕೆ ಕಣಕ್ಕಾಗಿ) ರೂ. 10 ಸಾವಿರ, ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ) ರೂ.40 ಸಾವಿರ, ಒಟ್ಟು ರೂ.55 ಸಾವಿರಗಳನ್ನು ಒಂದು ಜೋಡಿ ವಿವಾಹಕ್ಕೆ ದೇವಾಲಯದ ನಿಧಿಯಿಂದ ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಠ ಜಾತಿ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ ರೂ.50 ಸಾವಿರ ಒದಗಿಸಲಾಗುವುದು. ಈ ಅವಕಾಶ ಸದುಪಯೋಗಪಡಿಸಿಕೊಳ್ಳಲು ಬಯಸುವವರು ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದ ನಿಗದಿತ ಅರ್ಜಿ ನಮೂನೆಯನ್ನು ಶ್ರೀ ಓಂಕಾರೇಶ್ವರ ದೇವಾಲಯದ ಕಚೇರಿಯಿಂದ ತಾ. 26 ರಿಂದ ಪಡೆದುಕೊಂದು ಏಪ್ರಿಲ್ 24 ರೊಳಗೆ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೂ.ಸಂ: 81972 33378 ಅಥವಾ ಟೋಲ್ ಫ್ರೀ ದೂ.ಸಂ: 1800-4256654 ಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.