ದೂರದ ಚೀನಾ ದೇಶದ ಗಡಿದಾಟಿ ಮನೆಯಂಗಳಕ್ಕೆ ಬಂದು ನಿಂತಿದೆ ಕೊರೊನಾ ಮಾರಿ. ಚೀನಾದ ಆ ತುದಿಯಲ್ಲಿರುವ ರಾಷ್ಟ್ರಗಳು ಕೂಡಾ ಎಚ್ಚೆತ್ತುಕೊಂಡು ಮಾರಿ ಮನೆಯೊಳಕ್ಕೆ ಬಾರದಂತೆ ಕಾರ್ಯೋನ್ಮುಖವಾಗಿದೆ. ಪಕ್ಕದ ಗಡಿದೇಶ ನಮ್ಮ ಭಾರತದಲ್ಲೂ ಕೊರೊನಾ ಒಂದೆರೆಡು ಬಲಿ ತೆಗೆದುಕೊಂಡು ಭೀತಿ ಹುಟ್ಟಿಸಿದೆ. ಭಾರತÀದ ಗಡಿರಾಜ್ಯಗಳು, ದೈತ್ಯಪಟ್ಟಣಗಳು, ಈ ಮದ್ದು ಕಾಣದ ಖಾಯಿಲೆಗೆ ಬೆಚ್ಚಿ ಎಚ್ಚೆತ್ತುಕೊಂಡು ಅದರ ನೆರಳು ತಾಕದಂತೆ ಎಚ್ಚರವಹಿಸುತ್ತಿದೆ. ಈ ಕುರಿತು ಈಗ ನಾನು ಬರೆಯುತ್ತಾ ಕುಳಿತಿರುವ ಅತಿಸುಂದರ ಕೊಡಗಿನ ಅಕ್ಕಪಕ್ಕದ ಮಂಗಳೂರು, ಬೆಂಗಳೂರಿನವರೆಗೂ, ಕೊಡಗಿನ ಗಡಿ ಕೇರಳ ರಾಜ್ಯಕ್ಕು ಸೋಂಕು ಬಂದು ತಲುಪಿದೆ. ಅಲ್ಲಿನ ಆಡಳಿತಯಂತ್ರ, ವೈದ್ಯಕೀಯ ತಂಡ, ರಾಜಕೀಯ ವ್ಯವಸ್ಥೆ ಉಳಿದೆಲ್ಲವನ್ನು ಮರೆತು ಜೀವ ಉಳಿಸಿಕೊಳ್ಳುವ ಸಲುವಾಗಿ ಹಗಲು ರಾತ್ರಿ ಕೊರೊನಾವನ್ನು ಎದುರಿಸಲು ಶಸ್ತ್ರಸಜ್ಜಿತವಾಗಿ ಗುರಾಣಿ ಹಿಡಿದು ಗುದ್ದಾಡುತ್ತಿದೆ.
ಪ್ರಪಂಚದಾದ್ಯಂತ ವಿಶ್ವವಿಖ್ಯಾತ ವೈದ್ಯರು, ವೈದ್ಯಕೀಯ ಸಂಶೋದನಾ ಕೇಂದ್ರಗಳು ಈ ರೋಗವನ್ನು ಬಡಿದೋಡಿಸಲು ಬೇಕಾದ ಮದ್ದು ಹುಡುಕಲು ಕಣ್ಣಿಗೆ ಕಣ್ಣು ಹಚ್ಚದೆ ನಿದಿರೆಗೆಟ್ಟು ಕೆಲಸನಿರ್ವಹಿಸುತ್ತಿದೆ.
ಈತನ್ ಮಧ್ಯೆ ದೂರದ ಚೀನಾದೇಶದ ಬಲಿಷ್ಠ ಗಡಿದಾಟಿ ನಮ್ಮ ನೆರೆಮನೆಯವರೆಗೂ ಬಂದು ತಲುಪಿರುವ ನಮ್ಮ ಕೊಡಗು ಜಿಲ್ಲಾಡಳಿತಯಂತ್ರ, ವೈದ್ಯಕೀಯ ರಂಗ, ಸಾರ್ವಜನಿಕ ರಂಗ, ನಿರಮ್ಮಳರಾಗಿರುವುದನ್ನು ನೋಡುತ್ತಿದ್ದರೆ ಕೊರೊನಾ ಕೊಡಗಿನ ಗಡಿದಾಟಲು ಸಾಧ್ಯವೇ ಇಲ್ಲವೇನೊ ಅನಿಸತೊಡಗಿದೆ.
ಕೊರೊನಾ ಮುಂಜಾಗ್ರತ ಕ್ರಮ ಕೊಡಗಿನಲ್ಲಿ ಹೇಗಿದೆ? ಎಂದು ಒಂದು ಸುತ್ತು ಹಾಗೆ ನೋಡಿಕೊಂಡು ಬರುವುದಾದರೆ. ಸತತ ಎರಡು ಜಲಪ್ರಳಯ, ಗುಡ್ಡಕುಸಿತದಿಂದ ತತ್ತರಿಸಿ ಬುಡಮೇಲಾಗಿರುವ ಯಥಾಪ್ರಕಾರದ ಜೀವನ ಶೈಲಿ ಹಾಗೆ ಆಮೆ ವೇಗದಲ್ಲಿ ಆರಕ್ಕೆ, ಏಳದೆ ಮೂರಕ್ಕೆ ಇಳಿಯದೆ ದುಸ್ಥರ ಸ್ಥಿತಿಯಲ್ಲಿ ಮುಂದುವರೆದಿದೆ. ಕೊಡಗಿಗೆ ಮಂಗಳೂರು, ಕೇರಳ, ಮೈಸೂರು ಎಲ್ಲವೂ ಗಡಿಗೆ ಅಂಟಿಕೊಂಡತ್ತಿರುವ ಭೂಪ್ರದೇಶಗಳು, ವಿದೇಶಿ ರೋಗವೊಂದು ಕೇರಳಕ್ಕೂ, ಮಂಗಳೂರಿಗೂ ಬಂದು ತಲುಪಿದೆ, ಬೆಂಗಳೂರು ಸೇರಿದಂತೆ ಮೇಲೆ ಸೂಚಿಸಿರುವ ಮೂರು ಪ್ರದೇಶಗಳ ಜನಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಉಂಟಾಗಿದೆ. ಮದ್ದೇ ಇಲ್ಲದ ರೋಗ ಮನೆ ಬಾಗಿಲಿಗೆ ಬಾರದಂತೆ ಆಯಾ ಪ್ರದೇಶದ ಆಡಳಿತ ವ್ಯವಸ್ಥೆ ಟೊಂಕಕಟ್ಟಿ ದುಡಿಯುತ್ತಿದ್ದಾರೆ. ಆದರೆ ಕೊಡಗು? ಕೊಡಗು ಪ್ರಕೃತಿ ರಮಣೀಯ ತಾಣ, ಪ್ರವಾಸಿ ಮಂದಿರ, ದಕ್ಷಿಣ ಕಾಶಿ, ಕಾಶ್ಮೀರ ಅಂತೆಲ್ಲ ಅದೇ ಹಳೆ ಕತೆ ಹೇಳುವ ಅವಶ್ಯಕತೆ ಇಲ್ಲ. ವರ್ಷಕ್ಕೊಮ್ಮೆ ಬಂದು ಹೋಗುವ ಪ್ರವಾಸಿಗರಿಗೆ ಹಾಗೂ ವರ್ಷವಿಡೀ ಕೊಡಗಿನಲ್ಲೇ ಕಳೆಯುವ ನಮಗೆ ಕೊಡಗು ಮೆಲ್ನೋಟಕ್ಕೆ ಎಲವೂ ಪಾರದರ್ಶಕವಾಗಿದೆ. ಮೆಲ್ನೋಟಕ್ಕೆ ಕಾಣದ ಒಳಹೊಕ್ಕು ಕೊಂಚ ನೋಡುವುದಾದರೆ ಕೊಡಗು ಈ ಕೊರೊನಾದ ಕುರಿತು ಎಷ್ಟು ತಲೆಕೆಡಿಸಿಕೊಂಡಿದೆ ಎಂದು ಹೇಳುವು ದಾದರೆ ಆತಂಕ ಹುಟ್ಟಿಸುವಂತಹ ವಾಸ್ತವ ನಮಗೆ ಗೋಚರವಾಗುತ್ತದೆ.
ಕೊಡಗಿಗೆ ಹೊರ ರಾಜ್ಯ, ವಿದೇಶಗಳಿಂದ ಅದೇ ಮಂಗಳೂರು, ಬೆಂಗಳೂರು, ಕೇರಳದ ವಿಮಾನ ನಿಲ್ದಾಣದಿಂದ ಬಂದು ನಿರಮ್ಮಳರಾಗಿ ಪ್ರಕೃತಿ ಸವಿಯುತ್ತಿರುವ ಪ್ರವಾಸಿಗರು ಕೊರೊನ ಬಿಟ್ಟು ಹೋದರೂ, ಗಿಫ್ಟಾಗಿಕೊಟ್ಟು ಹೋದರು, ಆ ಕಾರಣದಿಂದ ಒಂದಿಷ್ಟು ಜೀವ ಹೋದರು ಇಲ್ಲಿ ಯಾರು ತಲೆಕೆಡಿಸಿಕೊಳ್ಳುವಂತೆ ಕಾಣಿಸುತ್ತಿಲ್ಲ.
ಜಿಲ್ಲಾಧಿಕಾರಿಗಳು ಕೊರೊನಾ ಮುಂಜಾಗ್ರತಾ ಕ್ರಮದ ಕುರಿತು ಶಿಸ್ತಾಗಿ ಅಧಿಕಾರಿಗಳನ್ನು ಕರೆದು ಕೂರಿಸಿ. ಏನೇನು ಮಾಡಬೇಕು, ಹೇಗೆ ಕ್ರಮವಹಿಸಬೇಕು, ಎಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಚರ್ಚಿಸಿ ಸಲಹೆ, ಸೂಚನೆ, ಆದೇಶ ಕೊಟ್ಟು ಕುಡಿಯಲು ಕೊಟ್ಟು ಅವರ ಕೆಲಸವನ್ನು ಮಾಡಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡು ಕಾಫಿ, ಬಿಸ್ಕತ್ತನ್ನು ತಿಂದು ಅಲ್ಲಿಂದ ಮರಳಿದ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ? ಎಂದು ಕೆಲವೊಂದು ಸಾರ್ವಜನಿಕರನ್ನು ವಿಚಾರಿಸಿದರೆ. ಆ ಕುರಿತು ಯಾವ ಮಾಹಿತಿಯೂ ಇಲ್ಲದ ಸಾರ್ವಜನಿಕರು ಮೇಲೆ ಕೆಳಗೆ ನೋಡುತ್ತಾರೆ. ಕೊಡಗು ಎಷ್ಟು ಸುಂದರವೋ ಅಷ್ಟೇ ಕೊಳಕಾದ ಮಾರುಕಟ್ಟೆಗಳು, ಕಸಾಯಿಖಾನೆಗಳು, ಸಣ್ಣ ಸಣ್ಣ ತೋಡಾಗಿ ಪರಿವರ್ತನೆಯಾದಂತಹ ಚರಂಡಿಗಳು, ಉದಾಹರಣೆ ಮಡಿಕೇರಿಯ ಹೃದಯ ಭಾಗದಲ್ಲಿರುವ ಸ್ಟೋನಿಲ್ ಕಸದ ರಾಶಿ. ಕೊರೊನಾ ತಡೆಗಟ್ಟಲು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎನ್ನುತ್ತದೆ ಆದೇಶ. ಗೋಣಿಕೊಪ್ಪ ಬಸ್ ನಿಲ್ದಾಣ, ಸಿದ್ದಾಪುರ ಮಾರುಕಟ್ಟೆಯನ್ನೊಮ್ಮೆ ಸುತ್ತು ಹಾಕಿದರೆ ವಾಸ್ತವ ಅರಿವಾಗುತ್ತದೆ.
ಕೊಡಗಿನ ಪಕ್ಕದ ಜಿಲ್ಲೆಗಳು ಮುಂಜಾಗ್ರತ ಕ್ರಮವಾಗಿ ತಾತ್ಕಾಲಿಕವಾಗಿ ಕಸಾಯಿಖಾನೆಗಳನ್ನು ಬಂದ್ ಮಾಡಿದ್ದಾರೆ. ಕೊಡಗಿನ ಕಸಾಯಿಖಾನೆಗಳಿಂದ ಹರಿಯುವ ನೆತ್ತರು ಸೀದಾ ರಸ್ತೆಗಳಲ್ಲಿ ಹರಿದಾಡುತ್ತದೆ. ಅದರ ಮೇಲೆ ಕೂತು ನಗುವ ನೊಣಗಳು ಮರು ಗಳಿಗೆ ಪಕ್ಕದ ಮನೆಯ ಅಡಿಗೆ ಕೋಣೆಗಳಿಗೆ ನಗುನಗುತ್ತಲೇ ನುಗ್ಗುತ್ತಿದೆ. ಜಿಲ್ಲಾಧಿಕಾರಿಗಳು ತಂಡ ರಚಿಸಿ ಕಾರ್ಯರೂಪಕ್ಕೆ ಕಳುಹಿಸಿ ಕೊಟ್ಟ ತಂಡಗಳು ಒಂದೆರೆಡು ಬಾರಿ ನಗರದ ರಸ್ತೆಗಳಿಗೆ ಪೆನಾಯಿಲ್ ಸಿಂಪಡಿಸಿ ಮನೆ ಸೇರಿಕೊಂಡಿದ್ದಾರೆ.
ಕೊಡಗಿನ ಗಡಿ ಭಾಗಗಳಾದ ಮಾಕುಟ್ಟ, ಕುಟ್ಟ, ಕರಿಕೆ, ಸಂಪಾಜೆ, ಆನೆಚೌಕುರು, ಕೊಡ್ಲಿಪೇಟೆ, ಕುಶಾಲನಗರದಿಂದ ಸುಗಮವಾಗಿ ಪ್ರವಾಸಿಗರು ಯಾವುದೇ ತಪಾಸಣೆಯ ಗೋಜಲಿಲ್ಲದೆ ಬಂದು, ಇದ್ದು, ಮರಳುತ್ತಿದ್ದಾರೆ. ಯಾಕೋ ಕೊಡಗಿನ ಆಸ್ಪತ್ರೆಗಳು ತನ್ನ ಎಂದಿನಂತಹ ಯಥಾಸ್ಥಿತಿಯನ್ನು ತಲೆಕೆಡಿಸಿಕೊಳ್ಳದೆ ಕಾಯ್ದುಕೊಂಡಿವೆ.
ವೈದ್ಯಕೀಯ ಅಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತಾಲೂಕು ಕಾರ್ಯ ನಿರ್ವಹಣಾ ಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾಕೋ ಕೊರೊನಾ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಸಾರ್ವಜನಿಕರಲ್ಲಿ ಬಹುತೇಕರು ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲದೆ ಟಿವಿಯಲ್ಲಿ ತೋರಿಸುವ ಕೊರೊನಾ ಸುದ್ದಿಯನ್ನು ನೋಡುತ್ತಾ ತಮ್ಮ ದಿನಚರಿಯಲ್ಲಿ ಮಗ್ನರಾಗಿದ್ದಾರೆ. ಅವರ ಮಕ್ಕಳು ರಸ್ತೆ ಬದಿಯ ನೊಣ ಮುತ್ತಿಕೊಳ್ಳುವ ತಿಂಡಿ ತಿನಿಸು ತಿನ್ನುತ್ತಾ ಆಟದಲ್ಲಿ ಮಗ್ನರಾಗಿದ್ದಾರೆ. ಉಳಿದೆಲ್ಲ ಅವಶ್ಯಕತೆ ಇಲ್ಲದ ವಿಚಾರಗಳಿಗೆಲ್ಲಾ ಜಾಥಾ ಹೊರ ಡುವ ಸ್ಥಳೀಯ ಖಾಸಗಿ ಸಂಘ ಸಂಸ್ಥೆಗಳು ಯಾಕೋ ಈ ಕೊರೊನಾ ವಿಚಾರದಲ್ಲಿ ಕಾಣೆಯಾಗಿದೆ.
- ಶ್ರೀಧರ್ ನೆಲ್ಲಿತ್ತಾಯ