ಶನಿವಾರಸಂತೆ, ಮಾ. 12: ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ 2019-20ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ ತಾ. 8 ರಂದು ಶನಿವಾರಸಂತೆ ಶ್ರೀ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದ ಉದ್ಘಾಟನೆ ಯನ್ನು ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ನೆರವೇರಿಸಿ ಮಾತನಾಡುತ್ತಾ, ಮಹಿಳೆಯರ ಶಕ್ತಿ ದೇಶಕ್ಕೆ ಬೇಕಾಗಿದೆ. ಶನಿವಾರಸಂತೆ ನಿವೃತ್ತ ಸೈನಿಕರ ಸಂಘ ಚೆನ್ನಾಗಿ ಕೆಲಸ ಮಾಡುತ್ತಿದೆ. ನಮ್ಮ ದೇಶವನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ನಮಗೆ ಜಾಗದ ವಿಚಾರದಲ್ಲಿ ಅನ್ಯಾಯವಾಗಿದೆ. ಮುಂದೆ ನಮ್ಮದೇ ಆದ ರ್ಯಾಲಿ ಮಾಡುತ್ತೇವೆ. ಇಡೀ ದೇಶವನ್ನೆ ಅಲ್ಲಾಡಿಸುವ ಶಕ್ತಿ ನಮಗಿದೆ ಎಂದರು.
ಜಿಲ್ಲಾ ನಿವೃತ್ತ ಸಂಘದ ಉಪಾಧ್ಯಕ್ಷ ಕರ್ನಲ್ ಚಿನ್ನಪ್ಪ, ಮಡಿಕೇರಿ ಇ.ಸಿ.ಹೆಚ್.ಎಸ್.ನ ಲೆ. ಕರ್ನಲ್ ಅಯ್ಯಪ್ಪ, ಮಡಿಕೇರಿ ದಿ. ಎಸ್.ಎಸ್. ಬೋರ್ಡ್ ಜಾಯಿಂಟ್ ಡೈರೆಕ್ಟರ್ ಲೆ. ಕರ್ನಲ್ ಗೀತಾ ಎಂ. ಶೆಟ್ಟಿ, ಜಿಲ್ಲಾ ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿ ಮೇಜರ್ ಓ.ಎಸ್. ಚಿಂಗಪ್ಪ, ಮಡಿಕೇರಿ ಸಿ.ಎಸ್.ಡಿ. ಕ್ಯಾಂಟೀನ್ ಮ್ಯಾನೇಜರ್ ಸುಬೇಧಾರ್ ಎಂ.ಕೆ. ಸುಬ್ಬಯ್ಯ, ಸೋಮವಾರಪೇಟೆ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸುಬೇಧಾರ್ ಈರಪ್ಪ, ಕುಶಾಲನಗರ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಾರಿಜೆಂಟ್ ಎಂ.ಎನ್. ಮೊಣ್ಣಪ್ಪ ಅವರುಗಳು ಮಾತನಾಡಿ, ನಿವೃತ್ತ ಸೈನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿ ಸಲಹೆ ಸೂಚನೆ ನೀಡಿ, ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಬೆಳಿಗ್ಗೆ 8 ಗಂಟೆಯಿಂದ ನಿವೃತ್ತ ಸೈನಿಕರು ಹಾಗೂ ಸೈನಿಕರ ಕುಟುಂಬ ವರ್ಗದ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹೆಬ್ಬುಲಸೆ ರಾಮಚಂದ್ರ ಅವರ ಸ್ಮರಣಾರ್ಥವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಸೈನಿಕರ ಮಕ್ಕಳಿಗೆ ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಸಮಾರಂಭದಲ್ಲಿ ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಎಸ್.ಎನ್. ಪಾಂಡು, ಸದಸ್ಯರುಗಳಾದ ಕೆ.ಎಂ. ಪುಟ್ಟಸ್ವಾಮಿ, ಕೆ.ಡಿ. ಚಂದ್ರಪ್ಪ, ಬಿ.ಆರ್. ಆನಂದ, ಕೆ.ಪಿ. ತಿಮ್ಮಯ್ಯ, ಪಿ.ಎನ್. ಗಂಗಾಧರ, ಗಿರೀಶ್, ಟಿ.ಎಸ್. ನಾಗರಾಜ್ ಹಾಗೂ ಇತರ ನಿವೃತ್ತ ಸೈನಿಕರುಗಳು ಉಪಸ್ಥಿತರಿದ್ದರು.
ನಿವೃತ್ತ ಸೈನಿಕರ ಜಾನಿ ಚಂದ್ರಶೇಖರ್ ಸ್ವಾಗತಿಸಿ, ವಿಜಯಲಕ್ಷ್ಮಿ ಸೋಮಶೇಖರ್ ನಿರೂಪಿಸಿ, ಸುಧಾ ಬಸಪ್ಪ ವಂದಿಸಿದರು.