ಸೋಮವಾರಪೇಟೆ,ಮಾ.11: ವಿಭಜಿತ ಕುಶಾಲನಗರ ತಾಲೂಕಿಗೆ ಮಾದಾಪುರ, ಗರ್ವಾಲೆ ಮತ್ತು ಹರದೂರು ಗ್ರಾಮ ಪಂಚಾಯಿತಿಗಳನ್ನು ಒಳಪಡಿಸಿ ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ, ಈ ಮೂರೂ ಗ್ರಾಮ ಪಂಚಾಯಿತಿಗಳನ್ನು ಸೋಮವಾರಪೇಟೆಗೆ ಸೇರಿಸಲು ಹೊಸ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ.
ಪ್ರಾರಂಭದಲ್ಲಿ ಸರ್ಕಾರದಿಂದ ಬಂದ ಆದೇಶದಲ್ಲಿ ನೂತನ ಹೋಬಳಿ ರಚನೆಗೆ ಅವಕಾಶ ನೀಡಬಾರದು ಎಂಬ ಸೂಚನೆ ಇದ್ದುದರಿಂದ, ಸುಂಟಿಕೊಪ್ಪ ಹೋಬಳಿಗೆ ಒಳಪಡುವ ಈ ಮೂರೂ ಗ್ರಾಮ ಪಂಚಾಯಿತಿಗಳನ್ನು ಕುಶಾಲನಗರಕ್ಕೆ ಸೇರ್ಪಡೆ ಗೊಳಿಸಲಾಗಿತ್ತು.
ಆದರೆ ಗರ್ವಾಲೆ, ಮಾದಾಪುರ ಮತ್ತು ಹರದೂರು ಪಂಚಾಯಿತಿ ಮಂದಿಗೆ ಸೋಮವಾರಪೇಟೆ ತಾಲೂಕು ಕೇಂದ್ರ ಹತ್ತಿರವಾಗಿದ್ದು, ಸಾರಿಗೆ ಸಂಪರ್ಕವೂ ಉತ್ತಮವಾಗಿದೆ ಎಂಬಿತ್ಯಾದಿ ವಿಷಯಗಳನ್ನು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆ ಜಿಲ್ಲಾಧಿಕಾರಿಗಳೂ ಸಹ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು.
ಅದರಂತೆ ಈ ಮೇಲಿನ ಮೂರೂ ಗ್ರಾಮ ಪಂಚಾಯಿತಿಗಳನ್ನು ಸೋಮವಾರಪೇಟೆಗೆ ಸೇರಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ. ಈ ಮಧ್ಯೆ ಅಧಿಕಾರಿ ವರ್ಗದಲ್ಲೂ ಸರ್ಕಾರದ ಆದೇಶ ಜಿಜ್ಞಾಸೆ ಮೂಡಿಸಿದ್ದು, ನೂತನ ಹೋಬಳಿ ಸೃಷ್ಟಿಸಬಾರದು ಎಂಬ ಅದೇಶ ವಿದೆಯೇ ಹೊರತು; ಅವುಗಳಿಂದ ಗ್ರಾಮಗಳನ್ನು ವಿಂಗಡಿಸಬಹುದೇ/ವಿಂಗಡಿಸಬಾರದೇ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲದ್ದರಿಂದ ಗೊಂದಲ ಕ್ಕೆಡೆ ಮಾಡಿದೆ.
ಸೋಮವಾರಪೇಟೆಯಿಂದ ಕುಶಾಲನಗರವನ್ನು ಬೇರ್ಪಡಿಸಿ, ಹೊಸ ತಾಲೂಕಾಗಿ ಘೋಷಿಸಿದ ನಂತರ ಸೋಮವಾರ ಪೇಟೆಯಲ್ಲಿ ಕುಗ್ರಾಮಗಳೇ ಉಳಿಕೆಯಾಗಿದ್ದವು. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಂಡಿರುವ ಪ್ರದೇಶಗಳು, ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾ.ಪಂ.ಗಳು ಕುಶಾಲನಗರಕ್ಕೆ ಸೇರ್ಪಡೆಯಾಗಿದ್ದು, ಈ ನಡುವೆ ತಾಲೂಕಿನ ಮಾದಾಪುರ, ಹರದೂರು, ಗರ್ವಾಲೆ ಗ್ರಾ.ಪಂ. ಗಳನ್ನೂ ಸಹ ಕುಶಾಲನಗರಕ್ಕೆ ಸೇರಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ, ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಿ, ಈ ಮೂರೂ ಗ್ರಾ.ಪಂ.ಗಳನ್ನು ಸೋಮವಾರಪೇಟೆಯಲ್ಲಿಯೇ ಉಳಿಸಿಕೊಳ್ಳುವಂತೆ ಮನವಿ ಮಾಡಿತ್ತು.
ಇದಾದ ನಂತರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳೂ ಸೇರಿದಂತೆ ಜಿಲ್ಲಾ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ವಾಸ್ತವತೆಯ ಬಗ್ಗೆ ವಿವರಣೆ ನೀಡಿದ ಹಿನ್ನೆಲೆ ಇದೀಗ ನೂತನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ದತೆ ನಡೆದಿದೆ.
ಇದೀಗ ಮಡಿಕೇರಿಯ ಜಿಲ್ಲಾ ಎನ್‍ಆರ್‍ಡಿಎಂಎಸ್‍ನಿಂದ ನೂತನ ನಕ್ಷೆ ತಯಾರಿಸಲಾಗಿದ್ದು, ಇದನ್ನು ಎಡಿಎಲ್‍ಆರ್ ಹಾಗೂ ಸರ್ವೆ ಸೂಪರ್‍ವೈಸರ್ ಅವರಿಂದ ಅಂತಿಮಗೊಳಿಸಿ, ತಹಸೀಲ್ದಾರ್ ಒಪ್ಪಿಗೆಯ ನಂತರ ಜಿಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅಲ್ಲಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಹೋಗಲಿದೆ.
ಈ ಮೊದಲು ಸರ್ಕಾರದಿಂದ ಬಂದ ಆದೇಶದಲ್ಲಿ ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಯನ್ನು ಸೇರಿಸಿ ನೂತನವಾಗಿ ಕುಶಾಲನಗರ ತಾಲೂಕು ರಚಿಸುವಂತೆ ಸೂಚಿಸಲಾಗಿತ್ತು. ಆದರೆ ಸುಂಟಿಕೊಪ್ಪ ಹೋಬಳಿಗೆ ಸೇರಿರುವ ಹರದೂರು, ಗರ್ವಾಲೆ, ಮಾದಾಪುರವನ್ನು ಸೋಮವಾರಪೇಟೆಯಿಂದ ಬೇರ್ಪಡಿಸಲು ವಿರೋಧ ವ್ಯಕ್ತವಾದ ಹಿನ್ನೆಲೆ, ಈ ಮೂರೂ ಪಂಚಾಯಿತಿ ಗಳನ್ನು ಸೋಮವಾರಪೇಟೆಗೆ ಸೇರ್ಪಡೆಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಜನಪ್ರತಿನಿಧಿಗಳು ಮತ್ತು ಸ್ಥಳೀಯ ಮುಖಂಡರ ಅಭಿಪ್ರಾಯವನ್ನೂ ಸಂಗ್ರಹಿಸಿ ಟಿಪ್ಪಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಮುಂದೆ ಜನಪ್ರತಿನಿಧಿಗಳ ಅಭಿಪ್ರಾಯದ ಮೇರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಉಪವಿಭಾಗಾಧಿಕಾರಿ ಜವರೇಗೌಡ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
- ವಿಜಯ್