ಮಡಿಕೇರಿ, ಮಾ. 11: ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ 2015ರಲ್ಲಿ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ಆಚರಣೆಯಿಂದ; ಮೂರು ವರ್ಷಗಳಲ್ಲಿ ಒಟ್ಟು 51 ಮೊಕದ್ದಮೆಗಳನ್ನು 404 ಮಂದಿ ವಿರುದ್ಧ ದಾಖಲಿಸಲಾಗಿತ್ತು. ಈ ಪೈಕಿ 18 ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರಕಾರವು ಇದೇ ತಾ. 3 ರಂದು ಆದೇಶಿಸಿದೆ. ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ವಿಷಯ ಪ್ರಸ್ತಾಪಿಸಿದ್ದು; ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉತ್ತರ ನೀಡಿದ್ದಾರೆ.

ಠಾಣಾವಾರು ಪ್ರಕರಣ : ಶಾಸಕರು ಟಿಪ್ಪು ಜಯಂತಿ ಸಂಬಂಧ ಕೊಡಗಿನ ಯಾವ ಯಾವ ಪೊಲೀಸ್ ಠಾಣೆಗಳಲ್ಲಿ ಎಷ್ಟೆಷ್ಟು ಮೊಕದ್ದಮೆ ದಾಖಲಾಗಿದೆ ಎಂದು ಸಚಿವರನ್ನು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉತ್ತರಿಸಿ; 2015ರಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ 17 ಮೊಕದ್ದಮೆಯೊಂದಿಗೆ 106 ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ ವೀರಾಜಪೇಟೆ ನಗರ ಠಾಣೆಯಲ್ಲಿ 2 ಪ್ರಕರಣದೊಂದಿಗೆ 73 ಮಂದಿ ಹಾಗೂ ಕುಶಾಲನಗರ ಠಾಣೆಯಲ್ಲಿ 7 ಪ್ರಕರಣದೊಂದಿಗೆ 52 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಅಲ್ಲದೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದೊಂದಿಗೆ ಆರೋಪಿಗಳು ಪತ್ತೆಯಾಗಿಲ್ಲ; ಗೋಣಿಕೊಪ್ಪಲುವಿನಲ್ಲಿ 2 ಪ್ರಕರಣ ಹಾಗೂ ಮಡಿಕೇರಿ ಗ್ರಾಮಾಂತರದಲ್ಲಿ 12 ಮಂದಿ ವಿರುದ್ಧ 3 ಮೊಕದ್ದಮೆ ನಮೂದಿಸಿದ್ದಾಗಿ ಸಚಿವರು ವಿವರಿಸಿದ್ದಾರೆ. ಇನ್ನು ಸಿದ್ದಾಪುರದಲ್ಲಿ 15 ಮಂದಿ ವಿರುದ್ಧ 4 ಪ್ರಕರಣ, ಸೋಮವಾರಪೇಟೆಯಲ್ಲಿ 5 ಮಂದಿ ವಿರುದ್ಧ 79 ಮೊಕದ್ದಮೆ, ನಾಪೋಕ್ಲುವಿನಲ್ಲಿ 20 ಮಂದಿ ವಿರುದ್ಧ 3, ಭಾಗ ಮಂಡಲ ಠಾಣೆಯಲ್ಲಿ 28 ಮಂದಿ 3 ಪ್ರಕರಣ ದಾಖಲಿಸಲಾಗಿತ್ತು ಎಂದು ಬೊಟ್ಟು ಮಾಡಿದ್ದಾರೆ.

2016 ಒಂದು ಪ್ರಕರಣ : ಅಂತೆಯೇ 2016ನೇ ಇಸವಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಒಂದು ಮೊಕದ್ದಮೆ ದಾಖಲಿಸಿದ್ದು; ಈ ಸಂಬಂಧ ಯಾವದೇ ಅಪರಿಚಿತರು ಪ್ರಕರಣದಲ್ಲಿ ಪತ್ತೆಯಾಗಿರುವದಿಲ್ಲ ವೆಂದು ಸಚಿವರು ಉತ್ತರಿಸಿದ್ದಾರೆ.

2017ರಲ್ಲಿ 3 ಮೊಕದ್ದಮೆ : ಆ ಬಳಿಕ ಜರುಗಿದ ಟಿಪ್ಪು ಜಯಂತಿ ಆಚರಣೆ ವೇಳೆ 2017ರಲ್ಲಿ ಪೊಲೀಸ್ ಇಲಾಖೆ ಕಾನೂನು ಕ್ರಮದೊಂದಿಗೆ; ಮಡಿಕೇರಿ ನಗರ ಠಾಣೆಯಲ್ಲಿ 14 ಮಂದಿ ವಿರುದ್ಧ 2 ಪ್ರಕರಣ ದಾಖಲಿಸಿದ್ದಾಗಿ ಗೃಹ ಸಚಿವರು ಶಾಸಕರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾತ್ರವಲ್ಲದೆ ಆ ವರ್ಷ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ನಾಲ್ಕು ಮಂದಿಯ ವಿರುದ್ಧ ಒಂದು ಪ್ರಕರಣ ಹೂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೇಲಿನ ಪ್ರಕರಣಗಳಲ್ಲಿ ಅಮಾಯಕ ಯುವಕರ ಹೆಸರುಗಳು ಸೇರ್ಪಡೆಗೊಂಡಿದ್ದು; ಅಂತಹವರ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಅಪ್ಪಚ್ಚುರಂಜನ್ ಗಮನ ಸೆಳೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪ್ರಕರಣಗಳನ್ನು ಸರಕಾರ ಪರಿಶೀಲಿಸುವದರೊಂದಿಗೆ; 18 ಮೊಕದ್ದಮೆಗಳನ್ನು ಹಿಂಪಡೆಯಲು ಸಂಬಂಧಿಸಿದ ಇಲಾಖೆಗೆ ಮಂಜೂರಾತಿ ನೀಡಿ ತಾ. 5 ರಂದು ಆದೇಶಿಸಿರುವದಾಗಿ ಮಾಹಿತಿ ನೀಡಿದ್ದಾರೆ.