ಸುಂಟಿಕೊಪ್ಪ, ಮಾ. 11: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಕಾಳಿ ದೇವಸ್ಥಾನದ ಎಡಭಾಗದಲ್ಲಿರುವ ಕುರ್ಪು ಕಾಲೋನಿ ರಸ್ತೆಗೆ ತಾಲೂಕು ಪಂಚಾಯಿತಿ ಅನುದಾನದಲ್ಲಿ ರೂ. 1.25 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ಕೆದಕಲ್ ಅಂಗನವಾಡಿ ಕೇಂದ್ರ ದುರಸ್ತಿಗೆ ರೂ. 50 ಸಾವಿರ ನೀಡಲಾಗಿದೆ. ತಾಲೂಕು ಪಂಚಾಯಿತಿಯ ಅನುದಾನದ 14 ಲಕ್ಷ ರೂ.ಗಳನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಮತ್ತು ಕೆದಕಲ್ ಗ್ರಾಮ ಪಂಚಾಯಿತಿಗಳಿಗೆ ಸಮಾನವಾಗಿ ಹಂಚಲಾಗಿದೆ. ಶಾಸಕರ ನಿಧಿಯಿಂದ ಪ್ರತೀ ಗ್ರಾಮದ ಹದಗೆಟ್ಟ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ಸಂದರ್ಭ ಕೆದಕಲ್ ಗ್ರಾಮದ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ರಮೇಶ್ ರೈ, ಕೆದಕಲ್ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸೋಮಯ್ಯ, ಗುತ್ತಿಗೆದಾರ ಅಂಬುದಾಸ್, ಗ್ರಾಮಸ್ಥರಾದ ಗೋಪಾಲ, ಶಶಿ ಹಾಜರಿದ್ದರು.