ವೀರಾಜಪೇಟೆ, ಮಾ. 11: ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆಬೆಟ್ಟದ ಮಲೆ ಮಹಾದೇಶ್ವರ ದೇವರ ಉತ್ಸವವನ್ನು ತಾ. 15 ರಿಂದ 20 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಲೆ ಮಹಾದೇಶ್ವರನ ಟ್ರಸ್ಟ್‍ನ ಅಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಾಚೀನ ಕಾಲದ ಮಲೆ ಮಹಾದೇಶ್ವರ ದೇವಸ್ಥಾನಕ್ಕೆ ವರ್ಷಂಪ್ರತಿ ಸಾವಿರಾರು ಮಂದಿ ಭಕ್ತಾದಿಗಳು ಭೇಟಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಿರುವುದು ವಿಶೇಷವೆನಿಸಿದೆ. ಉತ್ಸವದ ಅಂಗವಾಗಿ ತಾ. 15 ರಂದು ಕುಂದಿರ ಮನೆಯಿಂದ ಭಂಡಾರ ಬರುವುದು. ರಾತ್ರಿ 7 ಗಂಟೆಗೆ ಕೊಡಿಮರ ನಿಲ್ಲಿಸಿ ದೇವರಿಗೆ ವಿಶೇಷ ಪೂಜೆ ಅನ್ನ ಸಂತರ್ಪಣೆ, ತಾ. 16 ರಂದು ಹಗಲು 11ಗಂಟೆಗೆ ಸಾಮೂಹಿಕ ಮೃತ್ಯುಂಜಯ ಹೋಮ, ರಾತ್ರಿ 8 ಗಂಟೆಗೆ ಕಾಪು, ಮಹಾಪೂಜಾ ಸೇವೆ, ತಾ. 17 ರಂದು ಇರ್ ಬೊಳಕ್, ಮಹಾ ಪೂಜಾ ಸೇವೆ, ತಾ. 18 ರಂದು ಅಪರಾಹ್ನ 12 ಗಂಟೆಗೆ ನೆರಪು, ಎತ್ತ್ ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮಹಾ ಪೂಜಾ ಸೇವೆ, ಅನ್ನಸಂತರ್ಪಣೆ,

ಉತ್ಸವ ಮೂರ್ತಿ ದೇವರು ಹೊರಗೆ ಬರುವುದು, ಪೇಟೆ ಮೆರವಣಿಗೆ, ತಾ. 19 ರಂದು ಮಹಾ ಪೂಜಾ ಸೇವೆ, ದೇವರ ಜಳಕ ಅವಭೃತ ಸ್ನಾನ ತಾ. 20 ರಂದು ಕೊಡಿ ಮರ ಇಳಿಸುವುದು ಮಹಾಪೂಜಾ ಸೇವೆಯೊಂದಿಗೆ ಉತ್ತವ ಮುಕ್ತಾಯಗೊಳ್ಳಲಿದೆ ಎಂದರು.

ಟ್ರಸ್ಟ್‍ನ ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್ ಮಾತನಾಡಿ, ತಾ. 18 ಹಾಗೂ 19 ರಂದು ಮಗ್ಗುಲದ ದಂತ ವೈದ್ಯ ಕಾಲೇಜಿನ ವತಿಯಿಂದ ಭಕ್ತಾದಿಗಳಿಗಾಗಿ ದೇವಸ್ಥಾನಕ್ಕೆ ಹೋಗಿ ಬರಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಹಕಾರ್ಯದರ್ಶಿ ಚೋಕಂಡ ರಮೇಶ್, ದೇವತಕ್ಕರಾದ ಕೊಳುವಂಡ ಕಾರ್ಯಪ್ಪ, ಚಾರಿಮಂಡ ಗಣಪತಿ ಮತ್ತಿತರರು ಹಾಜರಿದ್ದರು.