ವೀರಾಜಪೇಟೆ, ಮಾ. 11: ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೊಟಿ ನೀಡುತ್ತಾ ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಬೆಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೂಮಿಕ ಚೋಂದಮ್ಮ ಹೇಳಿದರು.

ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಸಮುದಾಯ ಸ್ವಯಂ ಸೇವಕರು ಹಾಗೂ ಅಕ್ಷರ ಫೌಂಡೇಷನ್ ಆಶ್ರಯದಲ್ಲಿ ಬೇಟೋಳಿ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇಗುಲ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಕಲಿಕಾ ಆಂದೋಲನ ಸ್ಪರ್ಧೆ ನಡೆಯಿತು. ಸಮಾರಂಭಕ್ಕೆ ಆಗಮಿಸಿದ್ದ ಚೊಂದಮ್ಮ ಗಣಿತ ಎಂಬುದು ಕಬ್ಬಿಣದ ಕಡೆಲೆಯಲ್ಲ. ವಿದ್ಯಾರ್ಥಿಗಳು ಶಿಕ್ಷಕರು ಕಲಿಸುವ ಪಾಠವನ್ನು ಗಮನದಲ್ಲಿರಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವಲ್ಲಿ ಸಫಲರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಕ್ಷೇತ್ರ ಶಿಕ್ಷಣಾ ಇಲಾಖೆಯ ಗೀತಾಂಜಲಿ ಆಡಿದರು. ಕಾರ್ಯಕ್ರಮ ಉದ್ದೇಶಿಸಿ ಬೇಟೋಳಿ ಗ್ರಾಮ ಪಂಚಾಯಿತಿಯ ಗ್ರಾಮಾಭಿವೃದ್ಧಿ ಅಧಿಕಾರಿ ಮಣಿ ಮತ್ತು ಅಕ್ಷರ ಫೌಂಡೇಷನ್ ಸಂಸ್ಥೆಯ ನೋಡಲ್ ಅಧಿಕಾರಿ ಕುಮಾರ ಸ್ವಾಮಿ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಶಾಲೆಯ ನಿವೃತ್ತ ಶಿಕ್ಷಕರಾದ ದಮಯಂತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸೋಮಶೇಖರ್ ಬಿ.ಎಸ್., ಗ್ರಾಮ ಪಂಚಾಯಿತಿ ಸದಸ್ಯರಾದ ಸರಸ್ವತಿ, ಲೀಲಾವತಿ, ಲಾವಣ್ಯ, ಶಿಕ್ಷಣ ಕೊಳ್ತೊಡು ಕ್ಲಸ್ಟರ್ ಸಮನ್ವಯ ಅಧಿಕಾರಿ ವೆಂಕಟೇಶ್, ಗುಂಡಿಕೇರೆ ಮತ್ತು ಚಿಟ್ಟಡೆ ಶಾಲೆಯ ಮುಖ್ಯೋಪಾಧ್ಯಾಯಿನಿಯರು ಉಪಸ್ಥಿತರಿದ್ದರು.