ಕಣಿವೆ, ಮಾ. 11: ಕೊಡಗು ಜಿಲ್ಲೆಯಲ್ಲಿನ ವಿವಿಧ ನಗರ ಪಟ್ಟಣ ಪ್ರದೇಶಗಳಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳ ಪೈಕಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಯ ಹತ್ತಾರು ಗಡಿ ಗ್ರಾಮಗಳ ನೂರಾರು ಬಡ ರೋಗಿಗಳೊಂದಿಗೆ ಕುಶಾಲನಗರದ ಆಸುಪಾಸಿನ ರೋಗಿಗಳು ಬರುತ್ತಾರೆ. ದಿನಂಪ್ರತಿ ಬರೋಬ್ಬರಿ 350 ರಿಂದ 400 ರಷ್ಟು ಮಂದಿ ಹೊರ ರೋಗಿಗಳಾಗಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳು ಮತ್ತು ಅಗತ್ಯ ವೈದ್ಯ ಸಿಬ್ಬಂದಿಗಳಿಲ್ಲ ಎಂಬ ಬಹು ದಿನಗಳ ಕೊರಗು ಇದೀಗ ಒಂದಷ್ಟು ನಿವಾರಣೆಯಾಗಿದೆ. ಇದೀಗ ಈ ಆಸ್ಪತ್ರೆಗೆ ಹೊಸ ರೂಪ ಕೊಡಲು ಆರೋಗ್ಯ ಇಲಾಖೆ ಚಿಂತಿಸಿದ್ದು ರಾಷ್ಟ್ರೀಯ ಗುಣಮಟ್ಟ ಖಾತ್ರಿಯ ಅಧಿಕಾರಿಗಳ ತಂಡ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಆಸ್ಪತ್ರೆಯ ಪ್ರತಿ ವಿಭಾಗಗಳನ್ನು ಖುದ್ದು ಪರಿಶೀಲಿಸಿತು.

ಆಸ್ಪತ್ರೆಗೆ ಬರುವ ಯಾವುದೇ ರೋಗಿ ತನ್ನ ಹಕ್ಕನ್ನು ಇಲ್ಲಿ ನೇರವಾಗಿ ಚಲಾಯಿಸಿ ತನಗೆ ಬೇಕಾದ ಸೌಲಭ್ಯ ಹೊಂದಿಕೊಳ್ಳುವ ವ್ಯವಸ್ಥೆಗೆ ಹೊಸರೂಪ ಕೊಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ರೋಗಿ ಅಸ್ಪತ್ರೆಗೆ ಧಾವಿಸಿದಾಗ ಆ ರೋಗಿಯನ್ನು ಮಾತನಾಡಿಸಿ ಆ ರೋಗಿಗೆ ಬೇಕಾದ ಚಿಕಿತ್ಸಾ ಸೌಲಭ್ಯ, ಭೇಟಿ ಮಾಡಬೇಕಾದ ವೈದ್ಯ ಸಿಬ್ಬಂದಿಗಳ ಬಗ್ಗೆ ಮೊದಲು ಅರಿವು ಮೂಡಿಸಲಾಗುತ್ತದೆ.

ಆ ರೋಗಿಗೆ ನೀಡಬೇಕಾದ ಚಿಕಿತ್ಸೆ, ಕೊಡಬೇಕಾದ ಔಷಧಿ ಪರಿಕರಗಳನ್ನು ಕ್ರಮಬದ್ಧವಾಗಿ ಒದಗಿಸುವುದು, ರೋಗಿಗಳು ಆಸ್ಪತ್ರೆಯ ಒಳಗೆ ಪ್ರವೇಶ ಮಾಡಿದ ತಕ್ಷಣ ಇದೇನೋ ಖಾಸಗಿಯೋ ಅಥವಾ ಸರ್ಕಾರಿ ಆಸ್ಪತ್ರೆಯೋ ಎಂಬಂತೆ ಹೊಸ ಭಾವನೆ ಹೊಂದುವಂತೆ ಮಾಡುವುದು, ರೋಗಿಗಳು ಆಸ್ಪತ್ರೆಗೆ ಬಂದಾಗ ಟೋಕನ್ ಸಿಸ್ಟಮ್ ಅಳವಡಿಸಿ ಆಸನಗಳಲ್ಲಿ ಕುಳಿತು ತಮ್ಮ ಸರದಿ ಬಂದಾಗ ಅಗತ್ಯ ವೈದ್ಯರ ಕೊಠಡಿಗೆ ತೆರಳಿ ಸೂಕ್ತ ಚಿಕಿತ್ಸೆ ಅಥವಾ ಮಾರ್ಗದರ್ಶನ ಪಡೆದು ತೆರಳುವ ಬಗ್ಗೆ ಮತ್ತು ಆಸ್ಪತ್ರೆಯ ಸ್ವಚ್ಛತೆ, ವೈದ್ಯ ಸಿಬ್ಬಂದಿಗಳು ರೋಗಿಗಳ ಜೊತೆ ನಡೆದುಕೊಂಡ ರೀತಿ ನೀತಿಗಳ ಬಗ್ಗೆ ರೋಗಿಗಳೇ ನೇರವಾಗಿ ತಮ್ಮ ಅಭಿಪ್ರಾಯ ದಾಖಲಿಸುವ ಹಾಗೂ ಆಸ್ಪತ್ರೆಯಲ್ಲಿನ ಒಳಿತು ಕೆಡುಕುಗಳ ಬಗ್ಗೆ ಸಲಹೆ ಮಾರ್ಗದರ್ಶನ ನೀಡುವ ಪುಸ್ತಕಗಳ ದಾಖಲಾತಿಗಳನ್ನು ಆಸ್ಪತ್ರೆಯಲ್ಲಿ ಇಟ್ಟು ಹೊಸ ವ್ಯವಸ್ಥೆಯನ್ನು ಜಾರಿ ಮಾಡುವ ಬಗ್ಗೆ ರಾಷ್ಟ್ರೀಯ ಗುಣಮಟ್ಟ ಖಾತ್ರಿ ತಂಡದ ರಾಷ್ಟ್ರೀಯ ಮಟ್ಟದ ಮೌಲ್ಯ ಮಾಪಕರಾದ ಡಾ. ಅನಿಲ್ ಕುಮಾರ್ ಹಾಗೂ ಜಿಲ್ಲಾ ಸಮಾಲೋಚಕ ಎಚ್.ಬಿ. ಮಹೇಶ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಧು ಸೂದನ್, ಹಿರಿಯ ಫಾರ್ಮಾಸಿಸ್ಟ್ ಬಿ. ನಟರಾಜು, ಬಾಲು, ಗಣೇಶ್ ಹಾಗೂ ದಾದಿಯರಿದ್ದರು.