ಸುಂಟಿಕೊಪ್ಪ, ಮಾ. 11: ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಇಲಾಖೆಯ ವತಿಯಿಂದ ಸುಂಟಿಕೊಪ್ಪ ಪಟ್ಟಣದ ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಕರೋನಾ ವೈರಸ್ ಕುರಿತು ಅರಿವು, ಮಾಹಿತಿ ಹಾಗೂ ಭಿತ್ತಿ ಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.
ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು, ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವುದು, ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆಯುವುದು, ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕರವಸ್ತ್ರ ಉಪಯೋಗಿಸುವುದರ ಬಗ್ಗೆ ಆರೋಗ್ಯ ಸಂದರ್ಶಕ ಚಂದ್ರೇಶ್ ಮಾಹಿತಿ ನೀಡಿದರು.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಕರೋನಾ ವೈರಸ್ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಯಾಗಿದೆ. ರೋಗದ ಲಕ್ಷಣಗಳು ವ್ಯಕ್ತಿಗಳಲ್ಲಿ ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಂ ಬೆÉೀಧಿಯಾಗುತ್ತದೆ.
ಸೊಂಕಿತ ವ್ಯಕ್ತಿಯು ಸೀನಿದಾಗ ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಸೋಂಕಿತ ವ್ಯಕ್ತಿಯ ಹಸ್ತ ಲಾಘವ ಮತ್ತು ಮುಟ್ಟುವಾಗ, ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ, ಸ್ವಚ್ಚಗೊಳಿಸದ, ಸುರಕ್ಷಿತವಲ್ಲದ ಕೈಗಳಿಂದದ ಕಣ್ಣು, ಮೂಗು ಬಾಯಿಯನ್ನು ಮುಟ್ಟುವದರಿಂದ ರೋಗಗಳ ವೈರಸ್ ಹರಡಬಹುದು. ಈ ಸಂದರ್ಭ ವಿವಿಧ ಗ್ರಾಮದ ಉಪಕೇಂದ್ರಗಳ ಆರೋಗ್ಯ ಸಹಾಯಕಿಯರು ಇದ್ದರು.