ಸಿದ್ದಾಪುರ, ಮಾ. 11: ವಾಹನ ಚಾಲಕನೋರ್ವ ಮುಖ್ಯ ರಸ್ತೆಯ ಬದಿಯಲ್ಲಿ ಕಸ ಸುರಿಯುತ್ತಿದ್ದುದನ್ನು ಪತ್ತೆ ಹಚ್ಚಿ ನೆಲ್ಯಹುದಿಕೇರಿ ಗ್ರಾ.ಪಂ. ಪಿ.ಡಿ.ಓ. ಚಾಲಕನಿಗೆ ರೂ. 5000 ದಂಡ ವಿಧಿಸಿದ ಘಟನೆ ನಡೆದಿದೆ. ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಮುಖ್ಯ ರಸ್ತೆಯ ಬದಿಯಲ್ಲಿ ಸಿದ್ದಾಪುರದ ಆಟೋ ಚಾಲಕ ಶಿಯಾಬ್ ಎಂಬವರ ವಾಹನದಲ್ಲಿ ಬಾಳೆಹಣ್ಣಿನ ಕಸಗಳನ್ನು ತಂದು ಬಾಷಾ ಎಂಬಾತ ರಸ್ತೆ ಬದಿಯಲ್ಲಿ ಸುರಿಯುತ್ತಿರುವುದನ್ನು ವ್ಯಕ್ತಿಯೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದು ನೆಲ್ಯಹುದಿಕೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಅವರಿಗೆ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಪಿ.ಡಿ.ಓ. ಸಿದ್ದಾಪುರ ಪೊಲೀಸ್ ಠಾಣೆಗೆ ಆಟೋ ಚಾಲಕನ ವಿರುದ್ಧ ದೂರು ನೀಡಿದ ಮೇರೆಗೆ ಪೊಲೀಸರು ಗೂಡ್ಸ್ ಆಟೋವನ್ನು ವಶಕ್ಕೆ ಪಡೆದುಕೊಂಡರು. ನಂತರ ಪಂಚಾಯಿತಿ ವತಿಯಿಂದ ರಸ್ತೆ ಬದಿಯಲ್ಲಿ ಕಸ ಸುರಿದ ವಾಹನ ಚಾಲಕನಿಗೆ ರೂ.5000 ದಂಡವನ್ನು ವಿಧಿಸಲಾಯಿತು. ನೆಲ್ಯಹುದಿಕೇರಿ ಭಾಗದಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿಯುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಗ್ರಾ.ಪಂ ವತಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದೆಂದು ಹಾಗೂ ರಸ್ತೆ ಬದಿಯಲ್ಲಿ ಕಸ ಹಾಕುವ, ಅಶುಚಿತ್ವವನ್ನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಪಿ.ಡಿ.ಓ. ಅನಿಲ್ ಕುಮಾರ್ ತಿಳಿಸಿದ್ದಾರೆ.