ಒಬ್ಬರು ನೀಡುವ ರಕ್ತ ಮತ್ತೊಬ್ಬರ ಪ್ರಾಣ ಉಳಿಸ ಲಿದೆ. ರಕ್ತದಾನ ಮಹಾದಾನ ಎಂಬ ಸತ್ಯವನ್ನು ಅರಿತ ಮಡಿಕೇರಿಯ ಕೆಲವು ಯುವಕರ ತಂಡ ವರ್ಷದ ಹಿಂದೆ ತುರ್ತು ಸಂದರ್ಭ ಗಳಲ್ಲಿ ರಕ್ತಬೇಕಾದವರಿಗೆ ನೀಡುವ ಸಲುವಾಗಿ ರಕ್ತದಾನಿಗಳ ಒಂದು ವಾಟ್ಸಾಪ್ ಗ್ರೂಪ್ ಮಾಡಿ ಕಾರ್ಯಾಚರಿಸುತ್ತಾ ಬಂದರು.

ಕೊಡಗು ಬ್ಲಡ್ ಡೋನರ್ಸ್ ಎಂಬ ಈ ವಾಟ್ಸಾಪ್ ಗ್ರೂಪ್ ಕೊಡಗಿನಲ್ಲಿರುವವರಿಗೆ ಮಾತ್ರವಲ್ಲದೆ ನೆರೆಯ ಸುಳ್ಯ ಪುತ್ತೂರು, ಮಂಗಳೂರು, ಹುಣಸೂರು, ಮೈಸೂರು ಉಡುಪಿ, ಹಾಸನ, ಶಿವಮೊಗ್ಗ, ಬೆಂಗಳೂರುಗಳಲ್ಲಿರುವವರಿಗೂ ರಕ್ತದಾನ ಮಾಡುವ ಸಲುವಾಗಿ ಆ ಊರುಗಳ ದಾನಿಗಳನ್ನೂ ಗ್ರೂಪ್‍ನಲ್ಲಿ ಸೇರಿಸಿಕೊಂಡು ಮುಂದುವರಿದಾಗ ಧ್ಯೇಯ ಎಂದು ಹೇಳುವ ಗ್ರೂಪ್‍ನ ಪ್ರಮುಖರು, ಯಾವದೇ ಊರುಗಳಲ್ಲಿ ರಕ್ತ ನೀಡಲು ಇತರ ರಕ್ತದಾನಿ ಸಂಘಟನೆಗಳ ಸಂಪರ್ಕವೂ ತಮಗಿದೆ ಎನ್ನುತ್ತಾರೆ. ಕೊಡಗು ಬ್ಲಡ್ ಡೋನರ್ಸ್ ತಂಡದ ಪ್ರಥಮ ವಾರ್ಷಿಕೋತ್ಸವ ತಾ. 12 ರಂದು (ಇಂದು) ಪೂರ್ವಾಹ್ನ 10 ಗಂಟೆಗೆ ಮಡಿಕೇರಿಯ ಬಾಲಭವನದಲ್ಲಿ ನಡೆಯಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ ಕೂಡ ನಡೆಯಲಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಸಧ್ಯದಲ್ಲೇ ಈ ವಾಟ್ಸಾಪ್ ಗ್ರೂಪ್ ಅನ್ನು ಒಂದು ಸಂಸ್ಥೆಯನ್ನಾಗಿ ಮಾರ್ಪಡಿಸಿ ಸರ್ಕಾರದಲ್ಲಿ ನೋಂದಾಯಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಯಾವದೇ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುವವರು 7760830077, 9741091808, 9535904123, 9731898768 ಈ ಸಂಖ್ಯೆಗಳನ್ನು ಸಂಪರ್ಕಿಸಿದಲ್ಲಿ ರಕ್ತದ ವ್ಯವಸ್ಥೆಯನ್ನು ಮಾಡಲಾಗುವದು ಎಂದು ತಂಡದ ವಕ್ತಾರರಾದ ಮೈಕಲ್ ವೇಗಸ್ ಹಾಗೂ ಮೊಹಮದ್ ಅಂಜುಂ ತಿಳಿಸಿದ್ದಾರೆ.

-ಪಿ. ಪಿ. ಸುಕುಮಾರ,

ಹಾಕತ್ತೂರು.