ಮಡಿಕೇರಿ, ಮಾ. 11: ಕಾಫಿ ತೋಟದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಅಲ್ಯುಮಿನಿಯಂ ಅಥವಾ ಕಬ್ಬಿಣದ ಏಣಿ ಬಳಸದೆ, ಬಿದಿರು ಅಥವಾ ಫೈಬರ್ ಇಲ್ಲವೇ ಇನ್ಸುಲೇಟೆಡ್ ಏಣಿ ಬಳಸುವಂತಾಗ ಬೇಕು ಎಂದು ಸೆಸ್ಕ್ ಕಾರ್ಯ ನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಕೋರಿದ್ದಾರೆ.
ವಿದ್ಯುತ್ ಸಂಬಂಧಿಸಿದಂತೆ ಕುಂದುಕೊರತೆ ಬಗ್ಗೆ ನಗರದ ಸೆಸ್ಕ್ ಉಪ ವಿಭಾಗದ ಕಚೇರಿಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೀಗ ಕಾಳುಮೆಣಸಿನ ಕೊಯ್ಲು ಸಮಯವಾಗಿದ್ದು, ತೋಟಗಳಲ್ಲಿ ಏಣಿ ಬಳಸಿ ಕೊಯ್ಲು ಮಾಡುವುದು ಸಾಮಾನ್ಯ. ಆದರೆ ಕಾರ್ಮಿಕರು ಅಲ್ಯುಮೀನಿಯಂ ಅಥವಾ ಕಬ್ಬಿಣದ ಏಣಿ ಬಳಸದೆ, ಬಿದಿರು ಅಥವಾ ಫೈಬರ್ ಇಲ್ಲವೇ ಇನ್ಸುಲೇಟಡ್ ಏಣಿಗಳನ್ನು ಬಳಸಿ ಎಂದು ಮನವಿ ಮಾಡಿದರು.
ತೋಟದೊಳಗೆಯೇ ವಿದ್ಯುತ್ ತಂತಿಗಳು ಹಾದುಹೋಗಿರುವು ದರಿಂದ, ಕೆಲವು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಕಾರ್ಯಪಾಲಕ ಇಂಜಿನಿಯರ್ ಅವರು ನುಡಿದರು.
ಉದ್ದನೆಯ ಲೋಹದ ಏಣಿಗಳನ್ನು ಹಾಗೂ ವಸ್ತುಗಳನ್ನು ಉಪಯೋಗಿಸುವಾಗ ಹತ್ತಿರ ಅಥವಾ ಮೇಲೆ ಹಾದುಹೋಗಿರುವ ವಿದ್ಯುತ್ ಮಾರ್ಗದ ಬಗ್ಗೆ ಎಚ್ಚರ ವಹಿಸಬೇಕು. ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಮುಟ್ಟಬಾರದು ಮತ್ತು ಈ ಬಗ್ಗೆ ನಿಗಮದ ಕಚೇರಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಅವರು ಕೋರಿದರು.
ಬಾಗಿರುವ ಅಥವಾ ಜೋತುಬಿದ್ದಿರುವ ವೈಯರ್ಗಳು ಸುತ್ತ-ಮುತ್ತಲಿನ ಪ್ರದೇಶದಲ್ಲಿ ಇದ್ದಲ್ಲಿ ಕೂಡಲೇ ಹತ್ತಿರದ ನಿಗಮದ ಕಚೇರಿಗೆ ತಿಳಿಸಬೇಕು. ಅಲ್ಲದೆ ಎಲ್ಇಡಿ, ಸಿಎಫ್ಎಲ್ ಬಲ್ಬ್ ಹಾಗೂ ಸೋಲಾರ್ ವಾಟರ್ ಹೀಟರ್ಗಳನ್ನು ಬಳಸುವಂತಾಗಬೇಕು. ವಿದ್ಯುತ್ ಸಂಬಂಧಿಸಿದ ದೂರುಗಳಿಗೆ ವಿದ್ಯುತ್ ಸಹಾಯವಾಣಿ 1912ಗೆ ಕರೆಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದೇ ವೇಳೆ ನಿಗಮದ ವತಿಯಿಂದ ದೀನ್ ದಯಾಳ್ ಉಪಾಧ್ಯಾಯ ಯೋಜನೆಯಡಿ 901 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಪೂರ್ಣಗೊಳಿಸಲಾಗಿದೆ. ಸೌಭಾಗ್ಯ ಯೋಜನೆಯಡಿ 4,138 ಕುಟುಂಬಗಳ ಗುರಿಯಲ್ಲಿ, ಇದುವರೆಗೆ ಸುಮಾರು 2,600 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಸೋಮಶೇಖರ್ ಅವರು ಮಾಹಿತಿ ನೀಡಿದರು.
ಇದಲ್ಲದೆ ನಿಗಮದ ವತಿಯಿಂದ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರ ಪೇಟೆ ಪಟ್ಟಣಗಳಲ್ಲಿ ರೂ. 19 ಕೋಟಿ ವೆಚ್ಚದಲ್ಲಿ ಸಮಗ್ರ ವಿದ್ಯುತ್ ಸಂಪರ್ಕ ಜಾಲ ಅಭಿವೃದ್ಧಿಯ ಕಾಮಗಾರಿ ನಡೆಯುತ್ತಿದ್ದು ಶೇ. 90 ರಷ್ಟು ಪೂರ್ಣಗೊಂಡಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.