ಸೋಮವಾರಪೇಟೆ, ಮಾ. 10: ಮೊಗೇರ ಸೇವಾ ಸಮಾಜದ ಯುವ ವೇದಿಕೆ ವತಿಯಿಂದ ಪತ್ರಕರ್ತ ಸುರೇಶ್ ಒಡೆಯನಪುರ ಅವರ ಸ್ಮರಣಾರ್ಥ ರಾಜ್ಯಮಟ್ಟದ ಕ್ರಿಕೆಟ್ ಮತ್ತು ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಯುವ ವೇದಿಕೆ ಅಧ್ಯಕ್ಷ ಪಿ.ಬಿ. ಸುರೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಸದಸ್ಯರಾಗಿ ಮತ್ತು ಪತ್ರಕರ್ತರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಸುರೇಶ್ ಒಡೆಯನಪುರ ಅವರ ಸ್ಮರಣಾರ್ಥ ಏಪ್ರಿಲ್ 25 ಮತ್ತು 26ರಂದು ಸೋಮವಾರಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಜ್ಯಮಟ್ಟದ ಪಂದ್ಯಾಟ ಆಯೋಜಿಸಲಾಗಿದೆ ಎಂದರು.
ಪುರುಷರಿಗೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಮೊಗೇರ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 20 ಸಾವಿರ ನಗದು, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ 10 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದು. ಮಹಿಳಾ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವಾಗಿ 3 ಸಾವಿರ, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ 1,500 ನಗದು ಮತ್ತು ಟ್ರೋಫಿ ವಿತರಿಸಲಾಗುವದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿದ್ದ ವೇದಿಕೆಯ ಗೌರವಾಧ್ಯಕ್ಷ ಹಾಗೂ ಪ.ಪಂ. ಸದಸ್ಯ ಪಿ.ಕೆ. ಚಂದ್ರು ಮಾತನಾಡಿ, ಮೊಗೇರ ಸಮಾಜ ಬಾಂಧವರಿಗೆ ತಾಲೂಕು ಕಚೇರಿಯಿಂದ ನೀಡುತ್ತಿರುವ ಜಾತಿ ದೃಢೀಕರಣ ಪತ್ರದಲ್ಲಿ ಹಲವಷ್ಟು ಗೊಂದಲಗಳಿದ್ದು, ಇದನ್ನು ಸರಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ. ಅಗತ್ಯಬಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರನ್ನು ಜಾಗ್ರತಗೊಳಿಸಿ ಹೋರಾಟವನ್ನೂ ರೂಪಿಸಲಾಗುವದು ಎಂದರು.
ಜಾತಿ ಪ್ರಮಾಣ ಪತ್ರದ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕೆಂದು ಕಳೆದ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಖಜಾಂಚಿ ಪಿ.ಬಿ. ದೇವರಾಜು, ಸಂಚಾಲಕ ಕೆ.ಟಿ. ಕುಮಾರ್, ಕ್ರೀಡಾ ಸಮಿತಿ ಅಧ್ಯಕ್ಷ ರಮೇಶ್ ಅವರುಗಳು ಉಪಸ್ಥಿತರಿದ್ದರು.