ಮಡಿಕೇರಿ, ಮಾ. 10: ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳ ಬಹುಭಾಗ ತೋಟಗಳ ಮರ ಗಿಡಗಳ ಮಧ್ಯದಲ್ಲಿ ಹಾದು ಹೋಗಿರುತ್ತದೆ. ತೋಟಗಳಲ್ಲಿ ಒಳ್ಳೆಮೆಣಸು ಕೀಳಲು ಮತ್ತು ಮರದ ಕೊಂಬೆಗಳನ್ನು ಕಡಿಯಲು ಅಲ್ಯೂಮಿನಿಯಂ ಏಣಿಗಳನ್ನು ಮತ್ತು ನೀರು ಹಾಯಿಸಲು ಅಲ್ಯೂಮಿನಿಯಂ ಸ್ಪ್ರಿಂಕ್ಲರ್ ಪೈಪ್‍ಗಳನ್ನು ಉಪಯೋಗಿಸು ತ್ತಿದ್ದು, ಇವುಗಳು ವಿದ್ಯುತ್ ಮಾರ್ಗಕ್ಕೆ ತಾಗಿ ಆಗಿಂದಾಗ್ಗೆ ವಿದ್ಯುತ್ ಅಪಘಾತಗಳು ಸಂಭವಿಸುತ್ತಿದೆ.

ಆದ್ದರಿಂದ, ಅಲ್ಯೂಮಿನಿಯಂ, ಕಬ್ಬಿಣದ ಏಣಿ ಬದಲು ಬಿದಿರು, ಫೈಬರ್ ಏಣಿಗಳನ್ನೇ ಉಪಯೋಗಿಸಿ ವಿದ್ಯುತ್ ಅಪಘಾತ ಗಳನ್ನು ತಡೆಗಟ್ಟಲು ಸೆಸ್ಕ್ ಇಲಾಖೆ ಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಕೋರಿದ್ದಾರೆ.