ಸಿದ್ದಾಪುರ, ಮಾ. 9: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ನದಿ ತೀರದ ನೆರೆ ಸಂತ್ರಸ್ತರು ಜಿಲ್ಲಾಡಳಿತ ಗುರುತಿಸಿದ ಪುನರ್ವಸತಿ ಜಾಗಕ್ಕೆ ತೆರಳುವುದಿಲ್ಲ ವೆಂದು ಒಕ್ಕೊರಲಿನಿಂದ ನಿರಾಕರಿಸಿ ನಿವೇಶನ ಹಂಚಿಕೆಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ಸೋಮವಾರ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾದ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತ ಗುರುತಿಸಿರುವ ಪುನರ್ವಸತಿ ಜಾಗವು ದೂರ ವಾಗಿರುವ ಕಾರಣದಿಂದ ಸಂತ್ರಸ್ತರು ಹಾಗೂ ನದಿ ತೀರದ ನಿವಾಸಿಗಳು ಅಲ್ಲಿಗೆ ತೆರಳುವುದಿಲ್ಲ ಎಂದು ನಿರ್ಧರಿಸಿ ಆ ನಿವೇಶನವು ತಮಗೆ ಬೇಡವೆಂದು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರದ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರದ ನೂರಾರು ಮನೆಗಳು ನೆಲಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಂತ್ರಸ್ತರಿಗೆ ಹಾಗೂ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಎಂಬಲ್ಲಿ 10 ಏಕರೆ ಸರ್ಕಾರಿ

(ಮೊದಲ ಪುಟದಿಂದ) ಭೂಮಿಯನ್ನು ವಶಕ್ಕೆ ಪಡೆದುಕೊಂಡು ಆ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಸಿದ್ಧತೆ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಫೆ.26 ರಂದು ಸಿದ್ದಾಪುರದ ಗ್ರಾ.ಪಂ. ವ್ಯಾಪ್ತಿಯ ನೆರೆ ಸಂತ್ರಸ್ತರಿಗೆ ಆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಯ ಸಭೆಯನ್ನು ಆಯೋಜಿಸಲಾಗಿತ್ತು.

ಆದರೆ ಹಂಚಿಕೆ ಪ್ರಕ್ರಿಯೆಗೆ ಸಂತ್ರಸ್ತರು ಬಾರದ ಹಿನ್ನೆಲೆಯಲ್ಲಿ ಸಭೆ ನಡೆದಿರಲಿಲ್ಲ. ನಂತರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಪವಿಭಾಗಾಧಿಕಾರಿ ಆದೇಶದ ಮೇರೆಗೆ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ಸಂತ್ರಸ್ತ ಕುಟುಂಬಗಳು ಇಂದು ನಿವೇಶನ ಹಂಚಿಕೆ ಮಾಡುವ ಸಭೆಗೆ ಹಾಜರಾಗಿ ನಿವೇಶನವನ್ನು ಪಡೆದುಕೊಳ್ಳುವಂತೆ ಅಮ್ಮತ್ತಿಯ ಕಂದಾಯ ಇಲಾಖೆಯ ವತಿಯಿಂದ ನೋಟಿಸನ್ನು ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ಪಡೆದ ನೂರಾರು ಸಂತ್ರಸ್ತ ಕುಟುಂಬಗಳು ಗ್ರಾ.ಪಂ ಸಭಾಂಗಣಕೆ ಇಂದು ಆಗಮಿಸಿದ್ದರು.

ನಿವೇಶನ ಹಂಚಿಕೆ ಪ್ರಕ್ರಿಯೆಯ ಸಭೆ ಪ್ರಾರಂಭವಾದ ಕೂಡಲೇ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು. ಈ ಸಂದರ್ಭ ಸಂತ್ರಸ್ತ ಮಹಿಳೆ ಎಂ.ಎ. ಯಮುನಾ ಮಾತನಾಡಿ ಜಿಲ್ಲಾಡಳಿತ ಈಗಾಗಲೇ ಬಿ.ಶೆಟ್ಟಿಗೇರಿಯಲ್ಲಿ ಗುರುತಿಸಿರುವ ಪುನರ್ವಸತಿ ಸ್ಥಳಕ್ಕೆ ನದಿ ತೀರದ ನಿವಾಸಿಗಳು ಹಾಗೂ ಸಂತ್ರಸ್ತರು ತೆರಳುವುದಿರಲು ಒಕ್ಕೊರಲಿನ ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಈ ಬಗ್ಗೆ ಸಂತ್ರಸ್ತರು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಬಿ.ಶೆಟ್ಟಿಗೇರಿ ಜಾಗವನ್ನು ನಿರಾಕರಿಸಿರುವ ಬಗ್ಗೆ ಮನವಿ ಪತ್ರವನ್ನು ನೀಡಿ ತಮಗೆ ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಜಾಗವನ್ನು ಕಲ್ಪಿಸಿಕೊಡುವಂತೆ ತಿಳಿಸಿದ್ದರು. ಇವರುಗಳಿಗೆ ಬಿ.ಶೆಟ್ಟಿಗೇರಿ ಜಾಗದಿಂದ ಕೆಲಸಕ್ಕೆ ತೆರಳಲು ಸಮಸ್ಯೆಯಾಗುತ್ತದೆ. ಕರಡಿಗೋಡು ಭಾಗದ ನಿವಾಸಿಗಳು ಹಾಗೂ ಅವರ ಮಕ್ಕಳು ಕಳೆದ ಹಲವು ವರ್ಷಗಳಿಂದ ಸ್ಥಳೀಯ ರೆಸಾರ್ಟ್‍ವೊಂದಕ್ಕೆ 80ಕ್ಕೂ ಅಧಿಕ ಮಂದಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇವರುಗಳಿಗೆ ತೊಂದರೆಯಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಅಮ್ಮತ್ತಿ ಹೋಬಳಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ ನಿವೇಶನ ಗುರುತಿಸಿ ಕೊಡುವಂತೆ ಎ.ಸಿ. ಯವರ ಬಳಿ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಜವರೇಗೌಡ ಮಾತನಾಡಿ ಸಿದ್ದಾಪುರ ವ್ಯಾಪ್ತಿಯ ನದಿ ತೀರದಲ್ಲಿ ಅನಧಿಕೃತವಾಗಿ ವಾಸ ಮಾಡಿಕೊಂಡಿದ್ದ ನಿವಾಸಿಗಳ ಮನೆಗಳು ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ನದಿ ತೀರದ ನಿವಾಸಿಗಳನ್ನು ಹಾಗೂ ಸಂತ್ರಸ್ತರನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಜಾಗದಲ್ಲಿ ಪುನರ್ವಸತಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಾಗವನ್ನು ಗುರುತಿಸಲಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಸರ್ಕಾರಿ ಭೂಮಿಗಳನ್ನು ಹುಡುಕುವ ಪ್ರಯತ್ನವನ್ನು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖಾ ವತಿಯಿಂದ ಪ್ರಯತ್ನಿಸಲಾಯಿತಾದರೂ ಕೆಲವು ಜಾಗಗಳು ಕಡಿಮೆಯಾಗಿದ್ದು, ಇನ್ನೂ ಕೆಲವು ಜಾಗಗಳ ಒತ್ತುವರಿದಾರರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಸಮರ್ಪಕವಾದ ಜಾಗ ಸಿಗದ ಹಿನ್ನೆಲೆಯಲ್ಲಿ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ 10 ಏಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ. ಈ ಜಾಗದಲ್ಲಿ 107 ನಿವೇಶನಗಳಿದ್ದು, ಈ ಪೈಕಿ 103 ಸಂತ್ರಸ್ತರಿಗೆ ಲಾಟರಿ ಮುಖಾಂತರ ನಿವೇಶನ ಹಂಚಿಕೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದರು. ಈ ಜಾಗವು ವಾಸಕ್ಕೆ ಯೋಗ್ಯವಾಗಿದ್ದು, ಈ ಜಾಗದಲ್ಲಿ ಸಂತ್ರಸ್ತರಿಗೆ 30*40 ಅಳತೆಯ ನಿವೇಶನವನ್ನು ನೀಡಿ ಸರ್ಕಾರದ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಪಂಚಾಯಿತಿ ಮೂಲಕ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು. ಅಲ್ಲದೇ ನಿವೇಶನದ ಜಾಗದಲ್ಲಿ ಉತ್ತಮವಾದ ಪಾರ್ಕ್, ರಸ್ತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದೆಂದು ಜವರೇಗೌಡ ಮಾಹಿತಿ ನೀಡಿದರು.

ಬಡಾವಣೆ ಸಮೀಪದಲ್ಲಿ ಶಾಲಾ, ಅಂಗನವಾಡಿ ಸೌಲಭ್ಯಕ್ಕೆ ಜಾಗವನ್ನು ಮೀಸಲಿಡಲಾಗುವುದು ಎಂದರು. ಸಂತ್ರಸ್ತರು ತಮ್ಮ ನಿಲುವನ್ನು ಬದಲಾಯಿಸಿ ಜಿಲ್ಲಾಡಳಿತ ಗುರುತಿಸಿರುವ ಬಿ.ಶೆಟ್ಟಿಗೇರಿ ಜಾಗಕ್ಕೆ ತೆರಳುವಂತೆ ಮನವಿ ಮಾಡಿದರು. ಆದರೆ ಸಂತ್ರಸ್ತರು ಮನವಿಗೆ ಸಮ್ಮತಿಸಲಿಲ್ಲ.

ಸಭೆಯಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್, ಗ್ರಾಮಲೆಕ್ಕಿಗರಾದ ಓಮಪ್ಪ ಬಣಕರ್, ಅನೀಶ್, ಸಿದ್ದಾಪುರ ಪಿ.ಡಿ.ಓ. ವಿಶ್ವನಾಥ್, ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು. -ವಾಸು ಎ.ಎನ್