ಮಡಿಕೇರಿ, ಮಾ. 9: ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಇಲ್ಲದಿರುವ ಅಧಿಕ ಪ್ರಮಾಣದ ಅಭಿವೃದ್ಧಿ ಶುಲ್ಕವನ್ನು ವಸೂಲು ಮಾಡುವ ಮೂಲಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದ ಕೊಡಗು ಘಟಕವು ಜಿಲ್ಲೆಯ ಗ್ರಾಹಕರ ಹಗಲು ದರೋಡೆ ನಡೆಸುತ್ತಿದೆ ಎಂದು ಆರೋಪಿಸಿರುವ ವಿದ್ಯುತ್ ಬಳಕೆದಾರರ ಹೋರಾಟ ಸಮಿತಿ, ಮುಂದಿನ 10ದಿನಗಳ ಒಳಗಾಗಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಹಾಗೂ ವಿದ್ಯುತ್ ಬಳಕೆಯ ನೋಂದಣಿ ಮಾಡಿಸದೇ ಅಸಹಕಾರ ಚಳವಳಿಯೊಂದಿಗೆ ನ್ಯಾಯಾಂಗ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ. ಯಾಲದಾಳು ಮನೋಜ್ ಬೋಪಯ್ಯ ಅವರು, (ಮೊದಲ ಪುಟದಿಂದ) ಹೊಸ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುವವರಿಂದ ಸೆಸ್ಕ್‍ನ ಮಡಿಕೇರಿ ಘಟಕವು ನಿವೇಶನಗಳಿಗೆ ಅನ್ವಯವಾಗುವ ದುಬಾರಿ ಅಭಿವೃದ್ಧಿ ಶುಲ್ಕವನ್ನು ವಸೂಲು ಮಾಡುತ್ತಿದ್ದು, ಇದು ಸರಕಾರದ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಸರಕಾರದಿಂದ ಹೊರ ಬೀಳದಿದ್ದರೂ, ಗ್ರಾಹಕರನ್ನು ಸುಲಿಗೆ ಮಾಡುವ ಕಾರ್ಯದಲ್ಲಿ ಇಲ್ಲಿನ ಕಾರ್ಯನಿರ್ವಾಹಕ ಇಂಜಿನಿಯರ್ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಹಕರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಮುಂದಿನ 10 ದಿನಗಳ ಒಳಗಾಗಿ ಸರಕಾರ ಇಲ್ಲವೇ ಸಂಬಂಧಿಸಿದ ಅಧಿಕಾರಿಗಳು ಈ ಗೊಂದಲವನ್ನು ಪರಿಹರಿಸಬೇಕು. ತಪ್ಪಿದಲ್ಲಿ ಸೆಸ್ಕ್ ಕಚೇರಿ ಮುಂದೆ ಸಾರ್ವಜನಿಕರನ್ನೊಳಗೊಂಡು ಪ್ರತಿಭಟನೆ ನಡೆಸಲಾಗುವುದಲ್ಲದೆ, ಮುಂದಿನ ದಿನಗಳಲ್ಲಿ ಅಸಹಕಾರ ಚಳವಳಿಯೊಂದಿಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.ಹೊಸ ವಿದ್ಯುತ್ ಸಂಪರ್ಕ ಪಡೆಯಲು ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಶುಲ್ಕವಾಗಿ ನಗರ ಪ್ರದೇಶಕ್ಕೆ ರೂ.4 ಸಾವಿರದಿಂದ 6,500 ಹಾಗೂ ಗ್ರಾಮಾಂತರ ಪ್ರದೇಶಕ್ಕೆ ರೂ.3 ಸಾವಿರದಿಂದ 5,750ಕ್ಕೆ ಹೆಚ್ಚಿಸಿ ದರ ನಿಗದಿ ಮಾಡಲಾಗಿದೆ. ಈ ಬಗ್ಗೆ 2020ರ ಫೆ. 11 ರಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೆ.ಇ.ಆರ್.ಸಿ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಬಡಾವಣೆಯಲ್ಲಿರುವ ನಿವೇಶನಗಳಿಗೆ ಮಾತ್ರ ಅಭಿವೃದ್ಧಿ ಶುಲ್ಕವನ್ನು ಏರಿಕೆ ಮಾಡಿರುವುದಾಗಿ ಸೆಸ್ಕ್‍ನ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಆದರೂ ಕೊಡಗು ವಿಭಾಗದ ಕಾರ್ಯಪಾಲಕ ಅಭಿಯಂತರರು ಉದ್ದೇಶ ಪೂರ್ವಕವಾಗಿ ಗ್ರಾಹಕರ ಮೇಲೆ ಅಭಿವೃದ್ಧಿ ಶುಲ್ಕವನ್ನು ಹೇರಿಕೆ ಮಾಡುತ್ತಿರುವುದು ಕಂಡು ಬಂದಿದೆ ಎಂದರು.

ಈ ಹಿಂದೆ ಕೆ.ಇ.ಆರ್.ಸಿ ನಿಯಮದ ಪ್ರಕಾರ 3.11 ನಿಯಮಾನುಸಾರ ಹಾಲಿ ವಿದ್ಯುತ್ ಮಾರ್ಗ ನಿವೇಶನ ಮತ್ತು ವಿದ್ಯುತ್ ಮಾರ್ಗದ ನಡುವೆ 30 ಮೀ. ಅಂತರವಿದ್ದರೆ 3 ಕಿ.ವ್ಯಾಟ್‍ವರೆಗೆ ಯಾವುದೇ ಶುಲ್ಕಗಳಿಲ್ಲ. 3 ಕಿ.ವ್ಯಾ.ನಿಂದ 15 ಕಿ.ವ್ಯಾ ವರೆಗೆ ಪ್ರತೀ ಕಿ.ವ್ಯಾ.ಗೆ ರೂ. 650 (ಸೇವಾ ಮಾರ್ಗ ಶುಲ್ಕ) ಮತ್ತು 15 ಕಿ.ವ್ಯಾನಿಂದ 25 ಕಿ.ವ್ಯಾ ವರೆಗೆ ಪ್ರತಿ ಕಿ.ವ್ಯಾ. ರೂ. 1,300 ಸಂಗ್ರಹಿಸಲಾಗುತ್ತಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ನಿಯಮ 3.2.3 ರಲ್ಲಿ ಲೇಔಟ್‍ಗಳಲ್ಲಿ ಬರುವ ನಿವೇಶನಗಳಿಗೆ ಅನ್ವಯವಾಗುವ ದರವನ್ನು ಸಾಮಾನ್ಯ ಸೇವಾ ಮಾರ್ಗ ಹೊಂದುವ ಮನೆಗಳಿಗೂ ಅನ್ವಯಿಸುವ ಮೂಲಕ ಕಾರ್ಯಪಾಲಕ ಅಭಿಯಂತರರು ಕೊಡಗಿನ ವಿದ್ಯುತ್ ಗ್ರಾಹಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಸೆಸ್ಕ್‍ನಿಂದ ಯಾವುದೇ ಅಧಿಕೃತ ಆದೇಶಗಳು ಬಾರದಿದ್ದರೂ, ಕೊಡಗು ವಿಭಾಗದ ಕಾಂiÀರ್iಪಾಲಕ ಅಭಿಯಂತರರು ತಮಗೆ ತೋಚಿದ ರೀತಿಯಲ್ಲಿ ನಿಯಮವನ್ನು ಪ್ರತಿಪಾದಿಸುತ್ತಿದ್ದಾರೆ. ಇದೊಂದು ಹಗಲು ದರೋಡೆಯಾಗಿದ್ದು, ಇದರ ವಿರುದ್ಧ ಜಿಲ್ಲೆಯ ಗ್ರಾಹಕರು ಜಾಗೃತರಾಗಬೇಕಾಗಿದೆ ಎಂದು ಮನೋಜ್ ಬೋಪಯ್ಯ ತಿಳಿಸಿದರು.

ತಾನು ಈಗಾಗಲೇ ನೆರೆಯ ಜಿಲ್ಲೆಗಳಲ್ಲಿ ವಿಧಿಸಲಾಗುವ ವಿದ್ಯುತ್ ಅಭಿವೃದ್ಧಿ ಹಾಗೂ ಸೇವಾ ಶುಲ್ಕದ ಮಾಹಿತಿಯನ್ನು ಸಂಗ್ರಹಿಸಿದ್ದು, ರಾಜ್ಯದ ಇತರ ಯಾವುದೇ ಜಿಲ್ಲೆಗಳಲ್ಲಿ ಇಷ್ಟು ಪ್ರಮಾಣದ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ. ಈ ಬಗ್ಗೆ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತಂದಿದ್ದರೂ, ಉಡಾಫೆಯ ಮಾತನಾಡುವ ಮೂಲಕ ವಿದ್ಯುತ್ ಬಳಕೆದಾರರಿಗೆ ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳವರು ಹೆಚ್ಚುವರಿ ವಿದ್ಯುತ್ ಬೇಡಿಕೆಗೆ ಅರ್ಜಿ ಸಲ್ಲಿಸುವಾಗಲೂ ನೂತನ ಮಾರ್ಗದ ಶುಲ್ಕವನ್ನೇ ಪಾವತಿಸಬೇಕೆಂದು ಒತ್ತಡ ಹೇರುವ ಮೂಲಕ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದನ್ನು ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ. ಅಲ್ಲದೆ ಈ ಸಂಬಂಧ ಈಗಾಗಲೇ 5 ಅರ್ಜಿಗಳನ್ನು ಗ್ರಾಹಕರ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯುತ್ ಗ್ರಾಹಕರಾದ ಎನ್. ಗೋಪಾಲಕೃಷ್ಣ, ಕೆ.ಎಂ. ಕವನ್, ಎಂ.ಕೆ. ಅರುಣ್‍ಕುಮಾರ್ ಹಾಗೂ ಎಸ್.ಈ.ಹೇಮನಾಥ್ ಉಪಸ್ಥಿತರಿದ್ದರು.