ಸೋಮವಾರಪೇಟೆ, ಮಾ. 9: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಬಗ್ಗೆ ಎಲ್ಲೆಡೆ ಜಾಗೃತಿ, ತಪಾಸಣಾ ಕಾರ್ಯಗಳನ್ನು ನಡೆಯುತ್ತಿದ್ದರೂ ಕೊಡಗಿನಲ್ಲಿ ಮಾತ್ರ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆ ಯಾವದೇ ಜಾಗೃತಿ ಕಾರ್ಯ ಕೈಗೊಳ್ಳದೇ ಮೌನ ವಹಿಸಿದ್ದಾರೆ ಎಂದು ಸೋಮವಾರಪೇಟೆ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರು, ಕೊರೊನಾ ವೈರಸ್ ಕೊಡಗಿಗೆ ಬರದಂತೆ ತಡೆಗಟ್ಟುವ ಯಾವ ಪ್ರಯತ್ನಗಳೂ ಸಹ ಈವರೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜನಪ್ರತಿಗಳಿಂದ ನಡೆದಿಲ್ಲ ಎಂದು ಆರೋಪಿಸಿದರು.

ಈಗಾಗಲೇ ಕೇರಳದಲ್ಲಿ ಕೊರೊನಾ ವೈರಸ್ ಹರಡಿರುವ ಬಗ್ಗೆ ವರದಿಯಾಗಿದ್ದು, ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗಿನಲ್ಲಿ ಯಾವದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕೊಡಗಿನಲ್ಲಿ ಮಾತ್ರ ಇಂತಹ ಕಾರ್ಯಕ್ರಮ ನಡೆದಿಲ್ಲ. ಜಿಲ್ಲಾಧಿಕಾರಿಗಳು, ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ತಕ್ಷಣ ಎಲ್ಲಾ ಜಿ.ಪಂ., ತಾ.ಪಂ., ಗ್ರಾ.ಪಂ. ವತಿಯಿಂದ ಸ್ಥಳೀಯವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಲೋಕೇಶ್ ಒತ್ತಾಯಿಸಿದರು.

ಕೇರಳದಿಂದ ಕೊಡಗು ಸಂಪರ್ಕಿಸುವ ಪ್ರಮುಖ ಮಾರ್ಗದಲ್ಲಿ ತಪಾಸಣಾ ಕೇಂದ್ರ ಆರಂಭಿಸುವ ಮೂಲಕ ಪ್ರಾಥಮಿಕವಾಗಿಯೇ ವೈರಸ್ ಹರಡುವದನ್ನು ತಡೆಗಟ್ಟಬೇಕು. ಪರಿಸ್ಥಿತಿ ಗಂಭೀರವಾಗಿದ್ದರೂ ಆರೋಗ್ಯ ಇಲಾಖೆ ಮಾತ್ರ ತನ್ನ ಜವಾಬ್ದಾರಿಯನ್ನು ಮರೆತಂತೆ ವರ್ತಿಸುತ್ತಿದೆ. ಇದರೊಂದಿಗೆ ಶಾಸಕರು, ಸಂಸದರು ಮೌನವಹಿಸಿದ್ದಾರೆ. ತಕ್ಷಣ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖಾಧಿಕಾರಿಗಳ ಸಭೆ ಕರೆದು ಕಾರ್ಯಕ್ರಮದ ಯೋಜನೆ ಸಿದ್ಧಪಡಿಸಬೇಕು ಎಂದು ಅಭಿಪ್ರಾಯಿಸಿದರು.

ಶೀತ ಪ್ರದೇಶದಲ್ಲಿ ಕೊರೊನ ವೈರಸ್ ಬೇಗ ಹರಡುವ ವರದಿ ಇರುವದರಿಂದ ಕೊಡಗಿನಂತಹ ಶೀತ ಪ್ರದೇಶದಲ್ಲಿ ಎಚ್ಚರಿಕೆಯ ಅಗತ್ಯವಿದೆ. ಆದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆ? ಎಂಬ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ತಕ್ಷಣ ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಕ್ರಮಕ್ಕೆ ಮುಂದಾಗದಿದ್ದಲ್ಲಿ, ಕಾಂಗ್ರೆಸ್ ಪಕ್ಷದ ವತಿಯಿಂದಲೇ ಜಿಲ್ಲೆಯ 6 ಬ್ಲಾಕ್‍ಗಳ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುವದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರೂ ಆಗಿರುವ ಕೆ.ಎಂ. ಲೋಕೇಶ್ ತಿಳಿಸಿದರು.

ಪಟ್ಟಣ ಸಮೀಪದ ಕಕ್ಕೆಹೊಳೆ, ಆಲೇಕಟ್ಟೆ ವ್ಯಾಪ್ತಿಯಲ್ಲಿ ಶುಚಿತ್ವ ಇಲ್ಲದೇ ಮೀನು, ಮಾಂಸದ ಮಾರಾಟ ನಡೆಯುತ್ತಿದೆ. ಬೆಳಗ್ಗೆ ಕಡಿಯುವ ಮಾಂಸವನ್ನು ರಾತ್ರಿ 10 ಗಂಟೆಯವರೆಗೂ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಯಾರೂ ಸಹ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಕೊರೊನಾ ವೈರಸ್ ಭೀತಿ ಹಿನ್ನೆಲೆ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆ ಮತ್ತು ರೋಗ ತಡೆಯುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಕೈಜೋಡಿಸುವ ಮೂಲಕ ವೈರಸ್ ಹರಡದಂತೆ ಕ್ರಮಕೈಗೊಳ್ಳಬೇಕು ಎಂದು ಅಭಿಪ್ರಾಯಿಸಿದರು.

ಪ.ಪಂ. ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸುವಂತೆ ಈಗಾಗಲೇ ತಾಲೂಕು ತಹಶೀಲ್ದಾರ್ ಗಮನ ಸೆಳೆಯಲಾಗಿದೆ ಎಂದು ಗೋಷ್ಠಿಯಲ್ಲಿದ್ದ ಪ.ಪಂ. ಸದಸ್ಯೆ ಶೀಲಾ ಡಿಸೋಜ ತಿಳಿಸಿದರು. ಅಂತೆಯೇ ತಾ.ಪಂ.ಗೆ ಸಂಬಂಧಿಸಿದ ಇಲಾಖಾಧಿಕಾರಿಗಳನ್ನು ಒಳಗೊಂಡಂತೆ ಸದಸ್ಯರ ತುರ್ತು ಸಭೆಯನ್ನು ಕರೆಯುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಗೋಷ್ಠಿಯಲ್ಲಿದ್ದ ತಾ.ಪಂ. ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಹೇಳಿದರು. ಗೋಷ್ಠಿಯಲ್ಲಿ ಪ.ಪಂ. ಸದಸ್ಯ ಉದಯಶಂಕರ್, ಕಿರಗಂದೂರು ಗ್ರಾ.ಪಂ. ಉಪಾಧ್ಯಕ್ಷ ಸುರೇಂದ್ರ, ಸದಸ್ಯ ಭರತ್‍ಕುಮಾರ್ ಉಪಸ್ಥಿತರಿದ್ದರು.