ಮಡಿಕೇರಿ, ಮಾ. 10: ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಸಂದರ್ಭ ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಖಾತ್ರಿ ಪಡಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಡ ಹೆಣ್ಣು ಮಕ್ಕಳ ವಿವಾಹ ವೆಚ್ಚವನ್ನು ಭರಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಸಪ್ತಪದಿ ಭಾಗ್ಯ” ಯೋಜನೆಯಂತೆ ಬಡಕೊಡವತಿ ಮದುಮಗಳಿಗೆ “ಪತ್ತಾಕ್ ಭಾಗ್ಯ”ಕಲ್ಪಿಸಬೇಕು.
ಬಡತನದ ಬೇಗೆಯಲ್ಲಿ ದಟ್ಟಕಾಡು, ಗಿರಿ ಕಂದರ, ನದಿತೊರೆಗಳ ನಡುವೆ ಸಂಕಷ್ಟದ ಬದುಕು ನಡೆಸುತ್ತಾ ಪೌಷ್ಟಿಕ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಬಡ ಕೊಡವ ಕುಟುಂಬಗಳ ಕೊಡವತಿ ಗರ್ಭಿಣಿಯರಿಗೆ ಕೊಡವ ಪರಂಪರೆಯಂತೆ ಪೌಷ್ಟಿಕ ಆಹಾರ ಒದಗಿಸಲು “ಕೂಪದಿ ಕೂಳ್ ಭಾಗ್ಯ” ಯೋಜನೆಯನ್ನು ಜಾರಿಗೆ ತರಬೇಕು. ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಕೊಡವ ಜನಾಂಗವನ್ನು ಶೀಘ್ರ ಬುಡಕಟ್ಟು ಸಮುದಾಯವೆಂದು ಅಧಿಕೃತವಾಗಿ ಘೋಷಿಸಬೇಕು ಎಂದು ನಾಚಪ್ಪ ಒತ್ತಾಯಿಸಿದ್ದಾರೆ.